ನವದೆಹಲಿ :  ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿದ್ದ ವಿವಾದಾತ್ಮಕ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಮಾನ್ಯಮಾಡಿದೆ. ಈ ಮೂಲಕ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಸ್ಸಿ,ಎಸ್ಟಿಸಮುದಾಯಕ್ಕೆ ಸೇರಿದ ಸಾವಿರಾರು ಸರ್ಕಾರಿ ಸಿಬ್ಬಂದಿ ಹಿಂಬಡ್ತಿಯ ಆತಂಕದಿಂದ ಪಾರಾದಂತಾಗಿದೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಎಸ್ಸಿ, ಎಸ್ಟಿನೌಕರರಿಗೆ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ಸಂಬಂಧ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ‘1978ರ ಏಪ್ರಿಲ್ 27 ರಿಂದ ನೀಡಲಾಗಿರುವ ತತ್ಪರಿಣಾಮದ ಜ್ಯೇಷ್ಠತೆ (ಬಡ್ತಿಯಲ್ಲಿ ನೀಡಿರುವ ಮೀಸಲಾತಿ)ಯನ್ನು ರಕ್ಷಿಸುವ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ-2018’ನ್ನು ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಸೇರಿದಂತೆ ಹಲವು ಮಂದಿ ಸುಪ್ರೀಂ ಮೊರೆ ಹೋಗಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ.ಉದಯ್ ಉಮೇಶ್‌ ಲಲಿತ್‌ ಮತ್ತು ನ್ಯಾ.ಧನಂಜಯ್‌ ವೈ. ಚಂದ್ರಚೂಡ್‌ ಅವರ ದ್ವಿಸದಸ್ಯ ನ್ಯಾಯಪೀಠವು ‘‘ಒಬ್ಬ ಅರ್ಹ ಅಭ್ಯರ್ಥಿಯೆಂದರೆ ಪ್ರತಿಭಾವಂತ ಅಥವಾ ಯಶಸ್ವಿ ಅಭ್ಯರ್ಥಿ ಎಂಬುದು ಮಾತ್ರವಲ್ಲ ಬದಲಾಗಿ ಆತನ ನೇಮಕಾತಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಸದಸ್ಯರನ್ನು ಮೇಲೆತ್ತುವ ಸಾಂವಿಧಾನಿಕ ಆಶಯವನ್ನು ಈಡೇರಿಸುವುದು ಮತ್ತು ವೈವಿಧ್ಯತೆ ಹಾಗೂ ಪ್ರಾತಿನಿಧಿಕ ಆಡಳಿತ ಖಾತ್ರಿ ಪಡಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟು ಮೀಸಲಾತಿ ಕಾಯ್ದೆ-2018 ಅನ್ನು ಎತ್ತಿ ಹಿಡಿಯಿತು.

ಹಿಂದಿನ ಕಾಯ್ದೆ ರದ್ದು ಮಾಡಿದ್ದ ಸುಪ್ರೀಂ: ರಾಜ್ಯ ಸರ್ಕಾರಿ ನೌಕರರ ಮೀಸಲಾತಿ ಆಧರಿತ ಬಡ್ತಿ ನೌಕರರ ಜ್ಯೇಷ್ಠತೆ ನಿರ್ಣಯ ಕಾಯ್ದೆ-2002 ಅನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಮುಂತಾದವರು ಈ ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2017ರಲ್ಲಿ ಈ ಕಾಯ್ದೆಯನ್ನು ಅಸಂವಿಧಾನಿಕ ಎಂದು ಸಾರಿತ್ತು. ಸಮುದಾಯಗಳಿಗೆ ಸರ್ಕಾರದ ಹುದ್ದೆಗಳಲ್ಲಿನ ಪ್ರಾತಿನಿಧ್ಯದ ಕೊರತೆ, ಸಮುದಾಯದ ಹಿಂದುಳಿದಿರುವಿಕೆ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವ ಮೂಲಕ ಆಡಳಿತದ ಮೇಲೆ ಬೀಳುವ ಒಟ್ಟಾರೆ ಪರಿಣಾಮವನ್ನು ಅಧ್ಯಯನ ನಡೆಸದೇ ಈ ಕಾಯ್ದೆ ಜಾರಿಗೆ ತರಲಾಗಿದೆ ಎಂಬ ಕಾರಣ ನೀಡಿ ಕಾಯ್ದೆಯನ್ನು ಅಸಿಂಧುಗೊಳಿಸಿತ್ತು. ಅಷ್ಟೇ ಅಲ್ಲದೆ, ಮೂರು ತಿಂಗಳೊಳಗೆ ಹೊಸ ಜ್ಯೇಷ್ಠತಾ ಪಟ್ಟಿತಯಾರಿಸುವಂತೆಯೂ ಸೂಚಿಸಿತ್ತು. ಸುಪ್ರೀಂ ತೀರ್ಪಿನಿಂದಾಗಿ ಪರಿಶಿಷ್ಟವರ್ಗದ ಸುಮಾರು 4,000 ಸಿಬ್ಬಂದಿ ಹಿಂಬಡ್ತಿಗೆ ಒಳಗಾಗುವ ಆತಂಕದಲ್ಲಿದ್ದರು.

ಈ ಹಂತದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅವರಿಂದ 31 ಇಲಾಖೆಗಳಲ್ಲಿನ ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವ ಮೂಲಕ ಆಡಳಿತದ ಮೇಲೆ ಬೀಳುವ ಒಟ್ಟಾರೆ ಪರಿಣಾಮದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ-2018’ಯನ್ನು ರೂಪಿಸಿದ್ದರು. ಈ ಕಾಯ್ದೆಯನ್ನೂ ಬಿ.ಕೆ.ಪವಿತ್ರಾ ಸೇರಿ ಸಾಮಾನ್ಯ ವರ್ಗದ ನೌಕರರು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹಾಗೆಯೇ 2017ರ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿಯೂ ಒಂದಷ್ಟುಅರ್ಜಿಗಳೂ ದಾಖಲಾಗಿದ್ದವು. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ವಿವಿಧ ಹಂತದಲ್ಲಿ ನಡೆಸಿದ ಸುಪ್ರೀಂ ಕೋಟ್‌ ಮಾ.6ರಂದು ಸುಪ್ರೀಂ ತೀರ್ಪು ಕಾದಿರಿಸಿತ್ತು.

ಲೋಪ ಸರಿಪಡಿಸಲಾಗಿದೆ: ಈಗ ಆ ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌, ಹೊಸ ಕಾಯ್ದೆ ರೂಪಿಸುವಾಗ ಕರ್ನಾಟಕ ಸರ್ಕಾರವು ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ ಮತ್ತು ಆಡಳಿತದ ದಕ್ಷತೆ ಮೇಲೆ ಬೀಳುವ ಒಟ್ಟಾರೆ ಪರಿಣಾಮವನ್ನು ಅಧ್ಯಯನ ನಡೆಸಿದೆ. ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್‌ ಕಾಯ್ದೆಯಲ್ಲಿ ಯಾವುದೆಲ್ಲ ಲೋಪಗಳಿವೆ ಎಂಬುದನ್ನು ಬೊಟ್ಟು ಮಾಡಿತ್ತೋ ಆ ಲೋಪಗಳನ್ನು ಸರಿಪಡಿಸಿ ನೂತನ ಕಾಯ್ದೆ ರಚಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ನೂತನ ಕಾಯ್ದೆಯು ನ್ಯಾಯಾಂಗದ ಅಧಿಕಾರದ ಮೇಲೆ ರಾಜ್ಯದ ಶಾಸನದ ಸವಾರಿ ಎಂದು ಪರಿಗಣಿಸಲ್ಲ. 2018ರ ಕಾಯ್ದೆಯು ಪ್ರಾತಿನಿಧ್ಯದ ಕೊರತೆ ಹೊಂದಿರುವ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನದ 16(4ಎ) ವಿಧಿಯಡಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ.

ಮೀಸಲಾತಿ ಕಾಯ್ದೆ-2018 ಅನ್ನು ಪ್ರಶ್ನಿಸಿದ ಅರ್ಜಿಗಳಲ್ಲಿ ಗಟ್ಟಿಗತನವಿಲ್ಲ. ಈ ಕಾಯ್ದೆ ಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ನೀಡಿರುವ ನಾಗರಾಜ್ ಮತ್ತು ಜರ್ನೈಲ್ ಸಿಂಗ್‌ ತೀರ್ಪುಗಳನ್ನು ಪಾಲಿಸುತ್ತಿದೆ. ಆದ್ದರಿಂದ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್‌ ಅರ್ಜಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.

ರಾಜ್ಯಪಾಲರ ನಡೆಗೆ ಸಮರ್ಥನೆ: ಇದೇ ವೇಳೆ, ಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೇ ರಾಷ್ಟ್ರಪತಿಗಳ ಮೇಜಿಗೆ ಕಳುಹಿಸಿದ್ದು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಿದ ಪ್ರಕ್ರಿಯೆ ಕಾನೂನು ಬದ್ಧವಾಗಿಯೇ ಇದೆ ಎಂದೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ. ರಾಜ್ಯ ಸರ್ಕಾರಗಳು ರೂಪಿಸುವ ಕಾಯ್ದೆ ನ್ಯಾಯಾಲಯದಲ್ಲಿ ಅಸಿಂಧುಗೊಳ್ಳಲು ಕಾರಣವಾಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮತ್ತೆ ಕಾಯ್ದೆ ರೂಪಿಸುವ ಅಧಿಕಾರ ರಾಜ್ಯಗಳಿಗಿದೆ. ಪರಿಹಾರತ್ಮಾಕ ಕಾಯ್ದೆಯು ಸಂವಿಧಾನ ಬದ್ಧವಾಗಿದ್ದು ನ್ಯಾಯಾಲಯದ ಅಧಿಕಾರವನ್ನು ಅತಿಕ್ರಮಿಸುವ ನಡೆಯಲ್ಲ ಎಂದು ನ್ಯಾಯಾಲಯ ಮಹತ್ವದ ನಿಲುವನ್ನು ಈ ತೀರ್ಪಿನಲ್ಲಿ ಪ್ರಕಟಿಸಿದೆ.

ರತ್ನಪ್ರಭಾ ವರದಿಯಲ್ಲಿ 2016ರ ಸಾಲಿನಲ್ಲಿ ರಾಜ್ಯದಲ್ಲಿನ ಒಟ್ಟು 31 ಇಲಾಖೆಗಳಲ್ಲಿ ಒಟ್ಟು 7,45,593 ಮಂಜೂರಾದ ಹುದ್ದೆಗಳಿದ್ದು 5,23,574 ಹುದ್ದೆಗಳು ಭರ್ತಿಯಾಗಿವೆ. ಇದರಲ್ಲಿ ಪರಿಶಿಷ್ಟವರ್ಗದ ಶೇ.10.65 ಮತ್ತು ಪರಿಶಿಷ್ಟಪಂಗಡದ ಶೇ. 2.92 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಲಾಗಿತ್ತು. ಡಿ ವಿಭಾಗ ಹೊರತು ಪಡಿಸಿ ಎ, ಬಿ ಮತ್ತು ಸಿ ವಿಭಾಗಗಳಲ್ಲಿ ಪರಿಶಿಷ್ಟರ ಕೊರತೆ ಇದೆ ಎಂದು ವರದಿ ತಿಳಿಸಿತ್ತು. ರತ್ನಪ್ರಭಾ ವರದಿಯು ನಿರ್ದಿಷ್ಟಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸದೇ ರೂಪಿಸಲಾಗಿದ್ದು ಈ ವರದಿಯನ್ನು ಅನೂರ್ಜಿತಗೊಳಿಸಬೇಕು ಎಂಬ ಬಿ.ಕೆ. ಪವಿತ್ರಾ ಪರ ವಕೀಲರ ವಾದವನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ. ರಾಜ್ಯ ಸೂಕ್ತ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸಿಯೇ ಮಸೂದೆ ರೂಪಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಡಿ ಗುಂಪಿನ ಉದ್ಯೋಗದಲ್ಲಿ ಪರಿಶಿಷ್ಟಸಿಬ್ಬಂದಿ ಸಂಖ್ಯೆ ಅತಿಯಾಗಿರುವುದಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಈ ಹುದ್ದೆಯಿಂದ ದೂರವಿರುವುದೇ ಕಾರಣ. ಆದ್ದರಿಂದ ಮೀಸಲು ವರ್ಗದಿಂದ ಡಿ ಗುಂಪಿಗೆ ನೇಮಕವಾದ ಸಿಬ್ಬಂದಿಗೆ ಮೀಸಲಾತಿ ನೀಡದಿರುವುದು ಅತಾರ್ಕಿಕ ಎಂದು ನ್ಯಾಯಾಲಯ ಹೇಳಿದೆ.

ಸಮಾನತೆ ಎಂಬುದು ನಿಜವಾಗಿಯೂ ಪರಿಣಾಮಕಾರಿ ಮತ್ತು ವಾಸ್ತವಿಕವಾಗಬೇಕು ಎಂದಾದರೆ ಪ್ರಸ್ತುತ ಸಮಾಜದಲ್ಲಿರುವ ಅಸಮಾನತೆ ಗುರುತಿಸಿ ಅದರಿಂದ ಹೊರಬರಬೇಕು. ಅವಕಾಶಗಳಲ್ಲಿನ ಸಮಾನತೆಗೆ ಮೀಸಲಾತಿ ಅಪವಾದವಲ್ಲ. ಜನ ಜನಿಸಿದ ಸಮಾಜದಲ್ಲಿ ಸಾಂಸ್ಥಿಕ ಷರತ್ತುಗಳನ್ನು ಹಾಕಿ ಪರಿಣಾಮಕಾರಿ ಮತ್ತು ವಾಸ್ತವಿಕ ಸಮಾನತೆಯನ್ನು ಸಾರಿ ನೈಜ ಸಮಾನತೆ ನೀಡುತ್ತದೆ ಎಂದು ನ್ಯಾ.ಚಂದ್ರಚೂಡ್‌ ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟರು.

ಕ್ರೀಮೀ ಲೇಯರ್‌ ಪರಿಕಲ್ಪನೆಯು ತತ್ಪರಿಣಾಮದ ಜ್ಯೇಷ್ಠತೆ ನೀಡುವ ವಿಷಯಕ್ಕೆ ಸಂಬಂಧಿಸಿ ಅಪ್ರಸ್ತುತ. ನಮ್ಮ ಮುಂದಿರುವ ಪ್ರಕರಣದಲ್ಲಿ ಪರಿಶಿಷ್ಟರಿಗೆ ಉದ್ಯೋಗ ಪ್ರವೇಶ ನೀಡುವುದನ್ನು ಪ್ರಶ್ನಿಸಲಾಗಿಲ್ಲ. ಹೀಗಾಗಿ ಮೀಸಲಾತಿ ಕಾಯ್ದೆ 2018 ತತ್ಪರಿಣಾಮದ ಜ್ಯೇಷ್ಠತೆಯನ್ನು ಹೆಚ್ಚುವರಿ ಪ್ರಯೋಜನ ಎಂದು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರದ ಪರ ಹಿರಿಯ ವಕೀಲರಾದ ಬಸವ ಪ್ರಭು ಪಾಟೀಲ್, ಕರ್ನಾಟಕ ಎಸ್ಸಿ ಮತ್ತು ಎಸ್ಟಿಇಂಜಿನಿಯರ್‌ ಗಳ ಕಲ್ಯಾಣ ಸಂಸ್ಥೆ ಪರ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌, ದಿನೇಶ್‌ ದ್ವಿವೇದಿ, ಲಕ್ಷ್ಮಿನಾರಾಯಣ ವಾದಿಸಿದರು. ರಿಚ್‌ ಅರ್ಜಿದಾರರ ಪರ ಹಿರಿಯ ವಕೀಲರಾದ ರಾಜೀವ್‌ ಧವನ್‌, ಶೇಖರ್‌ ನಾಫ್ಡೆ ವಾದ ಮಂಡನೆ ಮಾಡಿದ್ದರು.

ಏನಿದು ಪ್ರಕರಣ?

ಪರಿಶಿಷ್ಟವರ್ಗದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲು ಕಲ್ಪಿಸುವ 2002ರ ಕಾಯ್ದೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರಿ ಅಧಿಕಾರಿ ಬಿ.ಕೆ.ಪವಿತ್ರ ಮತ್ತಿತರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಕಾಯ್ದೆ ಅಸಂವಿಧಾನಿಕ ಎಂದು ತೀರ್ಪಿತ್ತಿತ್ತು. ಇದರಿಂದಾಗಿ ಈಗಾಗಲೇ ಬಡ್ತಿ ಪಡೆದಿದ್ದ ಸುಮಾರು 4000 ಸರ್ಕಾರಿ ನೌಕರರು ಹಿಂಬಡ್ತಿಗೆ ಒಳಗಾಗುವ ಆತಂಕದಲ್ಲಿದ್ದರು. ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ರಾಜ್ಯದ 31 ಇಲಾಖೆಗಳಲ್ಲಿ ಪರಿಶಿಷ್ಟರಿಗೆ ಪ್ರಾತಿನಿಧ್ಯ ಕೊರತೆ ಮತ್ತಿತರ ಅಂಶಗಳ ವರದಿ ಸಿದ್ಧಪಡಿಸಿತ್ತು. ಬಳಿಕ ಪರಿಶಿಷ್ಟರಿಗೆ ಬಡ್ತಿ ಮುಂದುವರಿಸುವ ಕುರಿತು ಹೊಸ ಕಾಯ್ದೆಯೊಂದನ್ನು ರಚಿಸಿತ್ತು. ಇದನ್ನೂ ಪವಿತ್ರ ಮತ್ತಿತರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ಇದೀಗ ವಜಾ ಆಗಿ, ಕಾಯ್ದೆ ಊರ್ಜಿತಗೊಂಡಿದೆ.


ಕೋರ್ಟ್‌ ಹೇಳಿದ್ದೇನು?

- ಒಬ್ಬ ಅಭ್ಯರ್ಥಿಯನ್ನು ಪರಿಗಣಿಸುವುದೆಂದರೆ ಆತ ಅಥವಾ ಆಕೆಯ ಪ್ರತಿಭೆ ಅಥವಾ ಯಶಸ್ಸನ್ನಷ್ಟೇ ಪರಿಗಣಿಸುವುದು ಎಂದಷ್ಟೇ ಅರ್ಥವಲ್ಲ

- ಪರಿಶಿಷ್ಟರನ್ನು ಮೇಲೆತ್ತುವ ಸಂವಿಧಾನದ ಆಶಯ ಎತ್ತಿ ಹಿಡಿಯುವ, ವೈವಿಧ್ಯತೆ ಮತ್ತು ಪ್ರಾತಿನಿಧಿಕ ಆಡಳಿತವನ್ನು ಖಾತ್ರಿಪಡಿಸುವಂತಿರಬೇಕು

- ಹೊಸ ಕಾಯ್ದೆ ರೂಪಿಸುವಾಗ ಕರ್ನಾಟಕ ಸರ್ಕಾರ ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ ಮತ್ತು ಆಡಳಿತ ದಕ್ಷತೆ ಕುರಿತ ಅಧ್ಯಯನ ನಡೆಸಿದೆ

- ಹಿಂದಿನ ಕಾಯ್ದೆಯಲ್ಲಿ ಯಾವೆಲ್ಲ ಲೋಪಗಳಿವೆ ಎಂದು ಕೋರ್ಟು ಬೊಟ್ಟು ಮಾಡಿತ್ತೋ ಅವುಗಳನ್ನು ಸರಿಪಡಿಸಿ ಹೊಸ ಕಾಯ್ದೆಯನ್ನು ರಚಿಸಿದೆ

- 2018ರಲ್ಲಿ ರಚಿಸಿದ ಹೊಸ ಕಾಯ್ದೆಯು ಪ್ರಾತಿನಿಧ್ಯ ಕೊರತೆ ಇರುವವರಿಗೆ ಮೀಸಲು ಕಲ್ಪಿಸುವ ಸಂವಿಧಾನದ 16(4ಎ) ವಿಧಿ ವ್ಯಾಪ್ತಿಯಲ್ಲೇ ಇದೆ

- ಹೊಸ ಕಾಯ್ದೆಯು ಸಂವಿಧಾನಬದ್ಧವಾಗಿದ್ದು, ನ್ಯಾಯಾಲಯದ ಅಧಿಕಾರವನ್ನು ಅತಿಕ್ರಮಿಸುವಂತಿಲ್ಲ. ಹಾಗಾಗಿ, ಕಾಯ್ದೆ ಮಾನ್ಯ ಮಾಡುತ್ತಿದ್ದೇವೆ


ಇತರ ವರ್ಗಕ್ಕೆ ಅನ್ಯಾಯವಾಗದು

ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಸಾವಿರಾರು ಎಸ್ಸಿ, ಎಸ್ಟಿನೌಕರರಿಗೆ ಆಗಿದ್ದ ಅನ್ಯಾಯ ತಡೆದಂತಾಗಿದೆ. ಈಗಾಗಲೇ ಬಡ್ತಿ ಪಡೆದ ಇತರೆ ವರ್ಗದ ಸರ್ಕಾರಿ ನೌಕರರಿಗೆ ಸುಪ್ರೀಂಕೋರ್ಟ್‌ ತೀರ್ಪು ಮುಂದೊಡ್ಡಿ ಹಿಂಬಡ್ತಿ ನೀಡುವುದಿಲ್ಲ. ಆದರೆ, ಅವರು ಇರುವ ಹುದ್ದೆಯಲ್ಲೇ ಇರುತ್ತಾರೆನ್ನಲಾಗದು. ಅವರಿಗೆ ಅದೇ ಗ್ರೇಡ್‌ನ ಬೇರೆ ಹುದ್ದೆ ನೀಡಲಾಗುವುದು. ಅವರಿಗೆ ಅನ್ಯಾಯವಾಗದಂತೆ ಸೂಕ್ತ ಕಾನೂನು ರೂಪಿಸಲಾಗುವುದು.

- ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ