ಆಲ್ ಇಂಡಿಯ ದ್ರಾವಿಡ ಮುನೇತ್ರ ಕಳಗಂ ಪಕ್ಷದಲ್ಲಿ ಉತ್ತರಾಧಿಕಾರ ವಿವಾದ ಭುಗಿಲೆದ್ದಿದೆ.. ಜಯಾ ಆಪ್ತೆ ಶಶಿಕಲಾ ನಟರಾಜನ್ ಹಾಗೂ ಉಚ್ಛಾಟಿತ ಸಂಸದೆ ಶಶಿಕಲಾ ಪುಷ್ಪಾ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ  ಪುಷ್ಪಾ ಅವರ ಪತಿಗೆ ಗಂಭೀರ ಗಾಯಗಳಾಗಿವೆ. ಇನ್ನು ನಾಳೆ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಯಲಿದ್ದು ಜಂಟಿ ಕಾರ್ಯದರ್ಶಿ ಆಯ್ಕೆ ವಿವಾದವೇ ಇದಕ್ಕೆಲ್ಲಾ ಮೂಲ ಕಾರಣ.

ಚೆನ್ನೈ(ಡಿ. 28): ಮಾಜಿ ಮುಖ್ಯಮಂತ್ರಿ ಜಯಲಿತಾ ಅವರ ನಿಧನದ ಬಳಿಕ ತಮಿಳುನಾಡಿನ ರಾಜಕೀಯ ವಿದ್ಯಮಾನಗಳು ತೀವ್ರ ಬಿಕ್ಕಟ್ಟಿನತ್ತ ಹೊರಳುತ್ತಿದೆ.. ಇವತ್ತು ಎಐಎಡಿಎಂಕೆ ಪಕ್ಷದ ಕಚೇರಿಯ ಎದುರೇ 2 ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆ ಪಕ್ಷದ ಕೌನ್ಸಿಲ್‌ ಸಭೆ ನಡೆಯಲಿದೆ.. ಹೀಗಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಲು ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪಾ ಬೆಂಬಲಿಗರೊಂದಿಗೆ ಆಗಮಿಸಿದರು.. ಈ ವೇಳೆ ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರ್ತರೊಡನೆ ವಾಗ್ವಾದ ಶುರುವಾಗಿ ಸಮರವೇ ನಡೆದು ಹೋಯ್ತು.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಉಚ್ಛಾಟಿತ ರಾಜ್ಯಸಭಾ ಸಂಸದೆ ಶಶಿಕಲಾ ಬೆಂಬಲಿಗರು, ಪತಿ ಹಾಗೂ ನಾಲ್ವರು ವಕೀಲರೊಂದಿಗೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪಕ್ಷದ ಕೆಲ ಕಾರ್ಯಕರ್ತರೊಂದಿಗೆ ವಾಗ್ವಾದಗಳು ಆರಂಭವಾಗಿದೆ. ನಂತರ ಈ ಮಾತಿನ ಚಕಮಕಿಯು ಬಡಿದಾಟದ ಹಂತ ತಲುಪಿದೆ. ಪಕ್ಷದ ಕಚೇರಿ ಮುದಿನ ಬಡಿದಾಟದಲ್ಲಿ ಪೊಲೀಸರು ಕೂಡ ದಂಗಾಗಿ ಹೋದರು. ಉಚ್ಛಾಟಿತ ಸಂಸದೆ ಶಶಿಕಲಾ ಪುಷ್ಪಾ ಅವರ ಪತಿಗೆ ಗಂಭೀರ ಗಾಯಗಳಾಗಿದ್ದು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನಾಳಿನ ಸಭೆಯಲ್ಲಿ ಭಾಗವಹಿಸಲು ಅನುಮತಿಬೇಕಿದೆ’
ಆಗಸ್ಟ್ ತಿಂಗಳಿನಲ್ಲಿ ಸ್ಲ್ಯಾಪ್ ಗೇಟ್ ಘಟನೆಯ ಬಳಿಕ ಪಕ್ಷದ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿದ್ದಾರೆ ಅಂತ ಶಶಿಕಲಾ ಪುಷ್ಪ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇನ್ನು, ಘಟನೆ ಸಂಬಂಧ ಶಶಿಕಲಾ ಪುಷ್ಪ ರಿಯಾಕ್ಟ್ ಮಾಡಿದ್ದಾರೆ.. ನನ್ನನ್ನು ಅಮಾನತು ಮಾಡಲಾಗಿತ್ತೇ ವಿನಃ ಪಕ್ಷದಿಂದಲೇ ಹೊರಹಾಕಿಲ್ಲ. ಹೀಗಾಗಿ ನಾಳಿನ ಸಭೆಯಲ್ಲಿ ಭಾಗಿಯಾಗಲು ಅನುಮತಿ ನೀಡಬೇಕಿದೆ ಅಂತ ಹೇಳಿದ್ದಾರೆ.

ಶಶಿಕಲಾ ಪುಷ್ಪಾ ಏಟಿಗೆ ಎಐಎಡಿಎಂಕೆ ನಾಯಕರು ತಿರುಗೇಟು ಕೊಟ್ಟಿದ್ದರೆ. ಶಶಿಕಲಾ ಪುಷ್ಪ ಪಕ್ಷದಲ್ಲಿಲ್ಲ. ಹೀಗಾಗಿ ಪಕ್ಷದ ಪ್ರಧಾನ ಕಚೇರಿ ಬಳಿ ಬರಲು ಅವರಿಗೆ ಯಾವುದೇ ಹಕ್ಕಿಲ್ಲ. ಎಐಎಡಿಎಂಕೆ ಹಾಗೂ ಶಶಿಕಲಾ ಪುಷ್ಪಾ ನಡುವೆ ಯಾವುದೇ ಸಂಬಂಧವಿಲ್ಲ ಅಂತಲೂ ಗುಟುರು ಹಾಕಿದ್ದಾರೆ.

ಒಟ್ನಲ್ಲಿ ನಾಳಿನ ಕೌನ್ಸಿಲ್ ಸಭೆಯಲ್ಲಿ ಶಶಿಕಲಾ ನಟರಾಜನ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಆಗೋದು ಗ್ಯಾರೆಂಟಿ ಆಗಿದೆ. ಇದಕ್ಕಾಗಿ AIADMK ಪಕ್ಷದ ಬೈಲಾಗೆ ತಿದ್ದುಪಡಿ ತರಲಾಗಿದೆ. ಇವಾಗ ಶಶಿಕಲಾ ಪುಷ್ಪ ಸೃಷ್ಟಿಸಿರೋ ಹೈಡ್ರಾಮಾ ಪಕ್ಷದಲ್ಲಿ ಬಿರುಗಾಳಿ ಬೀಸಿದೆ. ಇದ್ರಿಂದ ಅಧಿನಾಯಕಿ ಜಯಲಲಿತಾ ಕಾಲವಾದ ಮೇಲೆ ಪಕ್ಷವೇ ಹೋಳಾದರೂ ಅಚ್ಚರಿ ಇಲ್ಲ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ.

- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್