ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಗ್ರಾಮದಲ್ಲಿ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿವೇಕ್ ಶೆಟ್ಟಿಯನ್ನು ಅಥಣಿಯ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ(ಜ. 09): ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಕ್ಕೆ ಬಿಜೆಪಿ ಶಾಸಕ ರಾಜು ಕಾಗೆಯವರ ಕುಟುಂಬದವರು ಮತ್ತು ಬೆಂಬಲಿಗರು ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ. ಜ.1ರಂದೇ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಗ್ರಾಮದಲ್ಲಿ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿವೇಕ್ ಶೆಟ್ಟಿಯನ್ನು ಅಥಣಿಯ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಕೀಯ ವೈಷಮ್ಯವೇ?
ಉಗಾರ ಗ್ರಾಮದ ನಿವಾಸಿಯಾದ ವಿವೇಕ್ ಶೆಟ್ಟಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಬಿಜೆಪಿ ಶಾಸಕ ರಾಜು ಕಾಗೆಯವರ ಕಡುವಿರೋಧಿ ಎನ್ನಲಾಗಿದೆ. ಫೇಸ್ಬುಕ್'ನಲ್ಲಿ ಈತ ಕೆಟ್ಟದಾಗಿ ಕಮೆಂಟ್ ಮಾಡಿದನೆಂಬ ಆರೋಪವಿದೆ. ಅಲ್ಲದೇ ರಾಜು ಕಾಗೆಯವರ ಪುತ್ರಿ ಉರ್ಫ ಪುಟ್ಟಿ ಅವರಿಗೆ ವಾಟ್ಸಾಪ್'ನಲ್ಲಿ ಕೆಟ್ಟ ಸಂದೇಶವನ್ನೂ ಕಳುಹಿಸಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜು ಕಾಗೆಯವರ ಪುತ್ರಿ ಉರ್ಫ ಪುಟ್ಟ, ಅವರ ಸೋದರ ಶಿವಗೌಡ ಕಾಗೆ ಹಾಗೂ ಬೆಂಬಲಿಗರು ಬಡಿಗೆ, ಕುಡುಗೋಲು ಮೊದಲಾದ ಮಾರಕಾಸ್ತ್ರಗಳನ್ನ ಹಿಡಿದು ಉಗಾರ ಗ್ರಾಮದಲ್ಲಿರುವ ವಿವೇಶ್ ಶೆಟ್ಟಿ ಮನೆಗೆ ನುಗ್ಗುತ್ತಾರೆ. ಬಳಿಕ ಆತನನ್ನು ಮನೆಯಿಂದ ಕೆಳಗಡೆಗೆ ಮೆಟ್ಟಿಲಿನಲ್ಲಿ ಧರಧರನೇ ಎಳೆದುಕೊಂಡು ಹೋಗುತ್ತಾರೆ. ರಾಜು ಕಾಗೆಯವರ ಮನೆಗೆ ಆತನನ್ನು ಕರೆದುಕೊಂಡು ಹೋಗಿ ಥಳಿಸುತ್ತಾರೆ.
ಬಿಜೆಪಿ ಮುಖಂಡರಾದ ರಾಜು ಕಾಗೆ ಅವರು ಕಾಗವಾಡ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಕರಣದ ಇದೀಗ ಬೆಳಕಿಗೆ ಬಂದಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
