ಚಂಡೀಗಢ[ಜು.07]: ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ನಟ ಸನ್ನಿ ಡಿಯೋಲ್‌ ಅವರು ಚುನಾವಣಾ ಆಯೋಗ ಮಿತಿಗೊಳಿಸಿದ ಹಣಕ್ಕಿಂತ ಹೆಚ್ಚು ಪ್ರಮಾಣದ ಹಣ ವೆಚ್ಚ ಮಾಡಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ತಮ್ಮ ಕ್ಷೇತ್ರದ ಅಭ್ಯುದಯಕ್ಕಾಗಿ ಪ್ರತಿನಿಧಿಯೊಬ್ಬರನ್ನು ನೇಮಿಸಿಕೊಳ್ಳುವ ಮೂಲಕ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿದ್ದ ಡಿಯೋಲ್‌ ಅವರು ತಮ್ಮ ಸಂಸದ ಹುದ್ದೆಯಿಂದ ಅನರ್ಹಗೊಳ್ಳುವ ಭೀತಿ ಎದುರಾಗಿದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಗುರುದಾಸ್‌ಪುರ ಜಿಲ್ಲಾ ಚುನಾವಣಾಧಿಕಾರಿ ಅಂತಿಮ ವರದಿ ಸಲ್ಲಿಸಿದ್ದು, ಡಿಯೋಲ್‌ ಅವರು ತಮ್ಮ ಗೆಲುವಿಗಾಗಿ 78,51,592 ರು. ಅಂದರೆ, ಆಯೋಗ ಮಿತಿಗೊಳಿಸಿದ್ದಕ್ಕಿಂತ 8.51 ಲಕ್ಷ ರು. ಹೆಚ್ಚು ವೆಚ್ಚ ಮಾಡಿದ್ದಾರೆ. ಇನ್ನು ಡಿಯೋಲ್‌ ಎದುರು ಸೋಲುಂಡ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖಡ ಅವರು 61,36,058 ರು. ವೆಚ್ಚ ಮಾಡಿದ್ದಾರೆ ಎಂದು ಹೇಳಿದೆ.