ಸೌರಶಕ್ತಿ ಬಳಸಿದರೆ ಸೂರ್ಯ ಕೋಪಿಸಿಕೊಳ್ಳುತ್ತಾನಂತೆ ಹೌದೆ?

Sun Angry About Use Solar
Highlights

ಜನರು ಸೋಲಾರ್‌ ಶಕ್ತಿಯನ್ನು ಬಳಕೆ ಮಾಡಿಕೊಂಡಲ್ಲಿ ಸೂರ್ಯ ಕೋಪಿಸಿಕೊಳ್ಳುತ್ತಾನೆ ಎಂದು ಬಿಜೆಪಿ ಸಂಸದ ಅಶೋಕ್‌ ಸಕ್ಸೇನಾ ಹೇಳಿಕೆ ನೀಡಿದ್ದಾರೆ.

‘ಬಿಜೆಪಿ ಸಂಘಿಗಳು’ ಬಿಜೆಪಿ ಕಾರ‍್ಯಕರ್ತರು ಸೋಲಾರ್‌ ಪ್ಯಾನೆಲ್‌ವೊಂದನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದ ಕೆಳಗೆ ‘ಅವರೇನು ಮಾಡುತ್ತಿದ್ದಾರೆಂದು ನಿಮಗೆ ಗೊತ್ತೇ? ಜನರು ಸೋಲಾರ್‌ ಶಕ್ತಿಯನ್ನು ಬಳಕೆ ಮಾಡಿಕೊಂಡಲ್ಲಿ ಸೂರ್ಯ ಕೋಪಿಸಿಕೊಳ್ಳುತ್ತಾನೆ ಎಂದು ಬಿಜೆಪಿ ಸಂಸದ ಅಶೋಕ್‌ ಸಕ್ಸೇನಾ ಹೇಳಿಕೆ ನೀಡಿದ್ದಾರೆ.

ಹಾಗಾಗಿ ಬಿಜೆಪಿ ಸಂಘಿಗಳು ಸೋಲಾರ್‌ ಪ್ಯಾನೆಲ್‌ ಧ್ವಂಸಕ್ಕೆ ಮುಂದಾಗಿದ್ದಾರೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಆಮ್‌ ಆದ್ಮಿ ಪಾರ್ಟಿಯ ಅಧಿಕೃತ ಫೇಸ್‌ಬುಕ್‌ಪೇಜ್‌ನಿಂದ ಈ ಪೋಸ್ಟ್‌ ಮಾಡಲಾಗಿದ್ದು, ಇದನ್ನು 15,000 ಜನರು ಶೇರ್‌ ಕೂಡ ಮಾಡಿದ್ದಾರೆ. ಇದೇ ವಿಡಿಯೋವನ್ನು ಈ ಹಿಂದೆ 2018 ಫೆಬ್ರವರಿಯಲ್ಲಿ ಕೂಡ ಬಿಜೆಪಿ ಬೆಂಬಲಿಗರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ‘ಗುಜರಾತ್‌ನಲ್ಲಿ ಮೋದಿ ವಿರೋಧಿಗಳು ಅಥವಾ ಜಿಗ್ನೇಶ್‌, ಹಾರ್ದಿಕ್‌ ಪಟೇಲ್‌ ಮುಂತಾದವರು ಸೇರಿ ಸೋಲಾರ್‌ ಪ್ಯಾನೆಲ್‌ ಅನ್ನು ಧ್ವಂಸಗೊಳಿಸುತ್ತಿದ್ದಾರೆ’ ಎಂದು ಹೇಳಿದ್ದರು. ಆದರೆ ಈಗ ಹೇಳಿರುವಂತೆ ನಿಜಕ್ಕೂ ಅಶೋಕ್‌ ಸಕ್ಸೇನಾ ಎಂಬುವರು, ಈ ರೀತಿಯ ಹೇಳಿಕೆಯನ್ನು ನೀಡಿದ್ದರೇ ಎಂದು ಹುಡುಕ ಹೊರಟಾಗ ಈ ವಿಡಿಯೋ ಹಿಂದಿನ ಅಸಲಿ ಕತೆ ತಿಳಿಯುತ್ತದೆ.

ಏಕೆಂದರೆ ಅಶೋಕ್‌ ಸಕ್ಸೇನಾ ಎಂಬ ಹೆಸರಿನ ಬಿಜೆಪಿ ಸಂಸದರೇ ಇಲ್ಲ! ಹಾಗಾಗಿ ಇದೊಂದು ನಕಲಿ ಹೇಳಿಕೆ ಎಂಬುದು ಸ್ಪಷ್ಟ. ವಾಸ್ತವವಾಗಿ ಈ ವಿಡಿಯೋ ಮಹಾರಾಷ್ಟ್ರಕ್ಕೆ ಸಂಬಂಧಪಟ್ಟಿದ್ದು, 2018 ಫೆಬ್ರವರಿಯಲ್ಲಿ ದಿನಗೂಲಿ ಕಾರ್ಮಿಕರು ತಮ್ಮ ವೇತನ ನೀಡಲಿಲ್ಲ ಎಂಬ ಕಾರಣಕ್ಕೆ ಸೋಲಾರ್‌ ಪ್ಯಾನಲ್‌ಅನ್ನು ಧ್ವಂಸಗೊಳಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಆಗ ದಿನಗೂಲಿ ಕಾರ್ಮಿಕರು ನಡೆಸಿದ ಪ್ರತಿಭಟನೆಯ ವಿಡಿಯೋವನ್ನೇ ತೆಗೆದುಕೊಂಡು ರಾಜಕೀಯ ಕೆಸರೆರೆಚಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ.

loader