ಆಸ್ತಿ ವಿವಾದದಂಥ ಪ್ರಕರಣಗಳಲ್ಲಿ ಸಮನ್ಸ್ ನೋಟಿಸ್‌ಗಳನ್ನು ಸಾಮಾನ್ಯವಾಗಿ ರೆಜಿಸ್ಟರ್ಡ್ ಪೋಸ್ಟ್ ಮೂಲಕ ಪ್ರತಿವಾದಿಗಳ ನಿವಾಸಕ್ಕೆ ಕಳುಹಿಸಲಾಗುತ್ತದೆ.

ಚಂಡೀಗಡ(ಏ.8): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರಕರಣದ ಪ್ರತಿವಾದಿಗೆ ಹರ್ಯಾಣ ಹಣಕಾಸು ನ್ಯಾಯಾಲಯದ ಆಯುಕ್ತ, ಐಎಎಸ್ ಅಕಾರಿ ಅಶೋಕ್ ಖೇಮ್ಕಾ ವಾಟ್ಸಪ್ ಮೂಲಕ ಸಮನ್ಸ್ ಜಾರಿ ಮಾಡಿದ್ದಾರೆ. ಹಣಕಾಸು ನ್ಯಾಯಾಲಯವೆಂಬುದು ನ್ಯಾಯಾಂಗದ ಬಾಗಶಃ ಭಾಗವಾಗಿದೆ.

ಆಸ್ತಿ ವಿವಾದದಂಥ ಪ್ರಕರಣಗಳಲ್ಲಿ ಸಮನ್ಸ್ ನೋಟಿಸ್‌ಗಳನ್ನು ಸಾಮಾನ್ಯವಾಗಿ ರೆಜಿಸ್ಟರ್ಡ್ ಪೋಸ್ಟ್ ಮೂಲಕ ಪ್ರತಿವಾದಿಗಳ ನಿವಾಸಕ್ಕೆ ಕಳುಹಿಸಲಾಗುತ್ತದೆ. ಹರ್ಯಾಣದಿಂದ ಕಾಠ್ಮಂಡುವಿಗೆ ತೆರಳಿರುವ ಆಸ್ತಿ ಪ್ರಕರಣದ ಪ್ರತಿವಾದಿಗೆ ವಾಟ್ಸಪ್ ಮೂಲಕ ನೋಟಿಸ್ ರವಾನೆಯನ್ನು ಸಮರ್ಥಿಸಿಕೊಂಡಿರುವ ಹಿರಿಯ ಐಎಎಸ್ ಅಕಾರಿ ಅಶೋಕ್ ಖೇಮ್ಕಾ, ಇದು ಇದೊಂದು ತಾಂತ್ರಿಕತೆಯ ಬದಲಾವಣೆ ಎಂದಿದ್ದಾರೆ. ಅಲ್ಲದೆ, ಬಾಡಿಗೆ ಮನೆಗಳಲ್ಲಿ ವಾಸಿಸುವ ನಗರವಾಸಿಗಳು ಆಗ್ಗಾಗ್ಗೆ ಮನೆಗಳನ್ನು ಬದಲಿಸುತ್ತಾರೆ. ಆದರೆ, ಮೊಬೈಲ್ ನಂಬರ್ ಬದಲಾವಣೆಯಾಗಲು ಸಾಧ್ಯವಾಗದಿರುವುದರಿಂದ, ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಖೇಮ್ಕಾ ಹೇಳಿದ್ದಾರೆ.

ಹರ್ಯಾಣದ ಹಿಸಾರ್ ಜಿಲ್ಲೆಯ ಗ್ರಾಮವೊಂದರ ಮೂವರು ಸಹೋದರರ ನಡುವಿನ ಆಸ್ತಿ ಭಾಗದ ವಿವಾದ ನಡೆದಿತ್ತು. ಆದರೆ, ಪ್ರಕರಣದ ಪ್ರತಿವಾದಿಯೋರ್ವ ಕಾಠ್ಮುಂಡುವಿಗೆ ತೆರಳಿದ್ದ. ಆತನ ವಿಳಾಸ ಲಭ್ಯವಿರದ ಕಾರಣ, ಕರೆ ಮಾಡಿ ಕೋರ್ಟ್‌ಗೆ ಹಾಜರಾಗುವಂತೆ ಕೇಳಿಕೊಂಡಾಗ, ಇದನ್ನು ನಿರಾಕರಿಸಿದ್ದ. ಅಲ್ಲದೆ, ತಾನು ವಾಸವಿರುವ ವಿಳಾಸ ನೀಡಲು ಆಕ್ಷೇಪಿಸಿದ್ದ. ಹಾಗಾಗಿ, ಏ.6ರಂದು ವಾಟ್ಸಪ್ ಮೂಲಕ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆ ವೇಳೆ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.