ಮಧುರೈ (ನ.26):  ತಮಿಳು ನಟ ಧನುಷ್ ನಮ್ಮ ಮಗ ಎಂದು ಮಧುರೈ ದಂಪತಿಗಳು ಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ಗೆ ಹಾಜರಾಗುವಂತೆ ನಟ ಧನುಷ್ ಗೆ ಮಧುರೈ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಮಧುರೈನ ಮೇಲೂರು ತಾಲೂಕಿನ ಮಲಮ್ ಪಟ್ಟಿ ಗ್ರಾಮದ ನಿವಾಸಿಗಳಾದ 60 ವರ್ಷದ ಕದೀರೇಷನ್ ಮತ್ತು ಪತ್ನಿ 55 ವರ್ಷದ ಮೀನಾಕ್ಷಿ ಅವರು ಧನುಷ್ ನಮ್ಮ ಮಗ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಮೂವರು ಮಕ್ಕಳಿದ್ದು ಅವರಲ್ಲಿ ಧನುಷ್ ಕೂಡ ಒಬ್ಬರು ಎಂದು ಹೇಳಿದ್ದಾರೆ.

ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜನವರಿ 12ನೇ ತಾರೀಖಿನ ಒಳಗೆ ಕೋರ್ಟಿಗೆ ಬಂದು ಹೇಳಿಕೆ ನೀಡುವಂತೆ ಧನುಷ್ ಗೆ ಸಮನ್ಸ್ ಜಾರಿ ಮಾಡಿದೆ. 1985ರಲ್ಲಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಧನುಷ್ ಜನಿಸಿದ್ದರು. ಧನುಷ್ ಮೊದಲ ಹೆಸರು ಕಲೈ ಸೆಲ್ವನ್. 10ನೇ ತರಗತಿವರೆಗೂ ಮೇಲೂರಿನಲ್ಲಿ ಶಿಕ್ಷಣ ಮುಗಿಸಿದ ಧನುಷ್ 11ನೇ ತರಗತಿಗಾಗಿ ತಿರಪತ್ತೂರಿಗೆ ಕಳುಹಿಸಲಾಗಿತ್ತು. ಆದರೆ ಚಿತ್ರರಂಗದಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿದ್ದ ಧನುಷ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಬಿಟ್ಟು ಓಡಿ ಹೋಗಿದ್ದ.  ಬಳಿಕ ತಮಿಳಿನ ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಬಳಿ ಕೆಲಸಕ್ಕೆ ನೇರಿಕೊಂಡಿದ್ದ. ನಾವು ಹಲವು ಬಾರಿ ಧನುಷ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ದಂಪತಿ ಕೋರ್ಟಿಗೆ ತಿಳಿಸಿದ್ದಾರೆ.