ಧಾರವಾಡ (ಜ. 06):  ‘ಕನ್ನಡವನ್ನು ನಾವು ಉಳಿಸಬೇಕು ಎಂಬ ಮನಸ್ಥಿತಿಯಿಂದ ಕನ್ನಡದಿಂದ ನಾವು ಉಳಿಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿ.’ ಇದು 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿಯ ತಿರುಳು.

ಸ್ವತಃ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಈ ವಿಚಾರಗೋಷ್ಠಿ ಮಹತ್ವ ಪಡೆದಿತ್ತು.

ಮಾತೃಭಾಷೆಯ ಶಿಕ್ಷಣ ಆಯ್ಕೆಯಾಗದೇ ಅನಿವಾರ್ಯವಾಗಿಸಲು ಸರ್ಕಾರ ದಿಟ್ಟಹೆಜ್ಜೆ ಇಡಬೇಕು. ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ಪಾಲಕರಲ್ಲಿ ಅರಿವು, ಮನವೊಲಿಸುವ ಕಾರ್ಯ ಆಗಬೇಕು. ಆರ್‌ಟಿಇಯ ಅನುದಾನವನ್ನು ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಬೋಧನೆಗೆ ಶಿಕ್ಷಕರ ನೇಮಕ ಹಾಗೂ ಮೂಲಸೌಲಭ್ಯ ಕಲ್ಪಿಸಲು ಮೀಸಲಿಡಬೇಕು ಎಂಬ ಒತ್ತಾಯವನ್ನು ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಶಿಕ್ಷಣ ತಜ್ಞರು ಸರ್ಕಾರದ ಮುಂದಿಟ್ಟರು.

ಆರ್‌ಟಿಇ ಮೂಲಕ ಅರೆಕಲಿಕೆ:

ಆರಂಭದಲ್ಲಿ ವಿಷಯ ಮಂಡಿಸಿದ ನಾಗರತ್ನಾ ಬಂಜಗೆರೆ, ಬಡ ಮಕ್ಕಳಿಗೆ ಅನುಕೂಲವಾಗಬೇಕಿದ್ದ ಆರ್‌ಟಿಇ ಪ್ರಸ್ತುತ ಅರೆಕಲಿಕೆಗೆ ಇಂಬು ನೀಡುತ್ತಿದೆ. ಇದಕ್ಕೆ 2013ರಿಂದ ಇಲ್ಲಿವರೆಗೆ 13 ಲಕ್ಷ ಮಕ್ಕಳು ಅರ್ಧಕ್ಕೇ ಶಾಲೆ ಬಿಟ್ಟಿರುವುದೇ ಸಾಕ್ಷಿ. ಆರ್‌ಟಿಇಯ ಮೂಲ ಉದ್ದೇಶದ ಅನುಷ್ಠಾನ ಪ್ರಕ್ರಿಯೆಯಲ್ಲಿ ಸರ್ಕಾರ ಎಡವಿದೆ. 28 ಸಾವಿರ ಶಾಲೆಗಳ ವಿಲೀನ ಪ್ರಕ್ರಿಯೆಯ ಮೂಲಕ ಸರ್ಕಾರಿ ಶಾಲೆಗಳ ಕತ್ತು ಹಿಚುಕುವ ಕಾರ್ಯ ಬಿಟ್ಟು, ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನವಾಗುವಂತೆ ಸರ್ಕಾರ ಯೋಜನೆ ರೂಪಿಸಲಿ ಎಂದು ಒತ್ತಾಯಿಸಿದರು.

ಖಾಸಗಿ ಲಾಬಿಗೆ ಮಕ್ಕಳು ಬಲಿಪಶು:

ಕನ್ನಡದ ಮಾಧ್ಯಮದ ಬಿಕ್ಕಟ್ಟಿನ ಕುರಿತು ಅಬ್ದುಲ್‌ ರೆಹಮಾನ್‌ ಪಾಷ, ಖಾಸಗೀ ಲಾಬಿಗೆ ಸರ್ಕಾರ ಹೆಗಲು ನೀಡಿದ ಪರಿಣಾಮ ಇಂದು ನಾಡಿನ ಭವಿಷ್ಯ ಕಟ್ಟಬೇಕಾದ ಮಕ್ಕಳು ಬಲಿಪಶುವಾಗಿದ್ದಾರೆ. ವ್ಯಾವಹಾರಿಕ ಭಾಷೆ ಕಲಿಯುವ ಧಾವಂತ ಮಾತೃಭಾಷೆಯನ್ನು ಮಸುಕಾಗಿಸುತ್ತಿದೆ. ಮಕ್ಕಳ ಶಿಕ್ಷಣ ಮಾಧ್ಯಮ ನಿರ್ಧಾರ ಪಾಲಕರ ಹಕ್ಕಾದರೂ ಅವರ ಮನವೊಲಿಸಿ, ಮಾತೃಭಾಷೆಯ ಶಿಕ್ಷಣದ ಅರಿವು ಮೂಡಿಸುವ ಕಾರ್ಯವಾಗಲಿ. ಕನ್ನಡ ಕಲಿಯುವ ಅನಿವಾರ್ಯತೆ, ಅಥವಾ ವಿವೇಚನೆಯ ಆಯ್ಕೆಯ ಪರಿಸ್ಥಿತಿ ನಿರ್ಮಾಣವಾದರೆ ಮಾತೃಭಾಷೆ ಉಳಿಸಬಹುದು ಎಂದರು.

ಹೈಟೆಕ್‌ ಕನ್ನಡ ಶಾಲೆ ನಿರ್ಮಿಸಿ:

ಸಿದ್ಧರಾಮ ಮನಹಳ್ಳಿ, ಸರ್ಕಾರ ಖಾಸಗಿ ಶಾಲೆಗಳಿಗೆ ರೆಡ್‌ಕಾರ್ಪೆಟ್‌ ಹಾಸುವ ಬದಲು ಹೈಟೆಕ್‌ ಕನ್ನಡ ಶಾಲೆಗಳನ್ನು ನಿರ್ಮಿಸಲು ಒತ್ತು ನೀಡಬೇಕು. ಇದಕ್ಕಾಗಿ ಪಂಚಾಯಿತಿ ಮಟ್ಟದಲ್ಲಿ ಶಾಲೆ ನಿರ್ಮಿಸಿ ಕಲಿಕಾ ವಾತಾವರಣವನ್ನು ಆಕರ್ಷಣೀಯವಾಗಿಸಬೇಕು ಎಂದರು.

ಶಿಕ್ಷಣಕ್ಕೆ ನೀಡುವ ಹಣ ಸಾಲದು:

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಎಸ್‌.ಜಯದೇವ್‌, ದೇಶದ ಶೇ.40ರಷ್ಟಿರುವ ಮಕ್ಕಳಿಗೆ ಬಜೆಟ್‌ನಲ್ಲಿ ಕೇವಲ ಶೇ.4ರಷ್ಟುಅನುದಾನ ಮೀಸಲಾಗುತ್ತಿದೆ. ಕಲಿಕೆ ಮಕ್ಕಳ ಮನಸ್ಸಿನ ಆಳಕ್ಕಿಳಿಯಲು ಮಾತೃಭಾಷೆಯಲ್ಲೇ ಗೃಹಿಕೆ ಆಗಬೇಕು. ಇಂಗ್ಲಿಷ್‌ ಮಾಧ್ಯಮ ಗೃಹಿಕೆಗೆ ಪೂರಕವಾಗಿಲ್ಲ. ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದ ಇನ್ನಾವುದೇ ಭಾಗದಲ್ಲಿ ಇಂಗ್ಲಿಷ್‌ ಕಲಿಕೆಗೆ ವಾತಾವರಣ ಇಲ್ಲ. ತಗಡಿನ ಶೆಡ್‌ಗಳಲ್ಲಿ ಇಂಗ್ಲಿಷ್‌ ಶಿಕ್ಷಣ ನೀಡುತ್ತಿರುವ ಸಂಗತಿಗಳು ಕೂಡ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಖಾಲಿ ಇರುವ 28582 ಬೋಧಕ ಸಿಬ್ಬಂದಿ, 73180 ಕಟ್ಟಡಗಳನ್ನು ನಿರ್ಮಿಸುವುದು ನಮ್ಮ ಮೂಲ ಆದ್ಯತೆಯಾಗಬೇಕು. ಸರ್ಕಾರಿ ಶಾಲೆಗಳಲ್ಲೂ ಪ್ರತಿ ಮಗುವಿಗೆ ಡೈರಿ ನಿಗದಿ, ಪಾಲಕರಿಗೆ ಎಸ್‌ಎಮ್‌ಎಸ್‌ ಕಳಿಸುವ ಹಾಗೂ ಸಭೆಯಲ್ಲಿ ಪಾಲಕರಿಗೆ ತಿಳಿವಳಿಕೆ ನೀಡುವ ಕಾರ್ಯವಾಗಲಿ ಎಂದರು.

ಇಂಗ್ಲಿಷ್‌ ಮಾಧ್ಯಮ ಕೈಬಿಡಲು ಸಿಎಂಗೆ ಮನವಿ ಸಲ್ಲಿಕೆ

ಶನಿವಾರದ ಮೊದಲ ಸಮ್ಮೇಳನದ 3ನೇ ಗೋಷ್ಠಿಯ ಮೂಲಕ ಕನ್ನಡ ಶಾಲೆಗಳನ್ನು ಉಳಿಸಲು ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು. ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಪ್ರಸ್ತಾವನೆ ಕೈಬಿಡಬೇಕು. ಶತಮಾನ ದಾಟಿದ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಬೇಕು. ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಸಿಎಂಗೆ ಮನವಿ ನೀಡಲಾಯಿತು.

- ಮಯೂರ ಹೆಗಡೆ