ಬೆಂಗಳೂರು (ಮಾ. 06):  ರಾಜ್ಯ​ದಲ್ಲಿ ಮುಂದಿನ ಮೂರು ತಿಂಗಳ ಅವ​ಧಿಯವರೆಗೆ ಇರು​ಳಿ​ನಲ್ಲಿ ಉಷ್ಣಾಂಶ ಹೆಚ್ಚ​ಳ​ವಾ​ಗ​ಲಿದ್ದು, ಪರಿ​ಣಾಮ ಸೆಕೆಯ ಪ್ರಮಾಣ ಹೆಚ್ಚಾ​ಗ​ಲಿದೆ ಎಂದು ಹವಾ​ಮಾನ ಇಲಾಖೆ ತಿಳಿ​ಸಿ​ದೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ ಅವಧಿಗಿಂತ ಮುನ್ನ ಬೇಸಿಗೆ ಆರಂಭವಾಗಿದೆ. ಮಾಚ್‌ರ್‍, ಏಪ್ರಿಲ್‌ ಹಾಗೂ ಮೇ ತಿಂಗಳ ಅವಧಿಯಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ಶೇ.2 ಡಿಗ್ರಿ ಸೆಲ್ಸಿಯಸ್‌ ಏರಿಕೆ ಆಗಲಿದೆ. ಇದರಿಂದ ಬಿಸಿ ಗಾಳಿ ಬಿಸಲಿದ್ದು, ರಾತ್ರಿ ವೇಳೆಯಲ್ಲಿ ಸೆಕೆ ಪ್ರಮಾಣ ಹೆಚ್ಚಾಗಲಿದೆ. ರಾಜ್ಯಾ​ದ್ಯಂತ ಸರಾಸರಿ ರಾತ್ರಿ ವೇಳೆಯಲ್ಲಿ 22 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯ​ತೆ​ಯಿದೆ ಎಂದು ಇಲಾ​ಖೆಯ ತಿಳಿ​ಸಿ​ದೆ.

ವಾಡಿಕೆಯಂತೆ ಉತ್ತರ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ (ಸರಾಸರಿ 34ರಿಂದ 36 ಡಿಗ್ರಿ ಸೆಲ್ಸಿಯಸ್‌) ಹಗಲು ವೇಳೆಯಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ. ಕರಾವಳಿ ಭಾಗದಲ್ಲಿ ಮಾತ್ರ ವಾಡಿಕೆ ಪ್ರಮಾಣಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಎರಡು ದಿನ ಮಳೆ ಸಾಧ್ಯತೆ:

ವಾತಾವರಣದಲ್ಲಿ ಗಾಳಿಯ ಒತ್ತಡ (ಟ್ರಫ್‌) ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವಡೆ ಮುಂದಿನ ಎರಡು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ. ಸೋಮವಾರ ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಆಗಿದೆ.

ಮುಂದಿನ ಎರಡು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜ ನಗರ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಐದರಿಂದ ಇಪತ್ತು ಮಿ.ಮೀ ಮಳೆ ಆಗಬಹುದು, ಉತ್ತರ ಒಳನಾಡು, ಮಳೆನಾಡು ಹಾಗೂ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.