ಗೌರಿ ಹತ್ಯೆಯ ಮತ್ತೊಂದು ರಹಸ್ಯ ಸ್ಫೋಟ!

Sujith Is the Master Midn  Of Gauri Lankesh
Highlights

ಗೌರಿ ಹತ್ಯೆಯ ಮತ್ತೊಂದು ರಹಸ್ಯ ಸ್ಫೋಟವಾಗಿದೆ. ವಿಚಾರವಾದಿಗಳ ಹತ್ಯೆ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿದ್ದ ಜಾಲಕ್ಕೆ ಹಂತಕರನ್ನು ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ ಆಯ್ಕೆ ಮಾಡಿದ್ದು, ಆರು ವರ್ಷಗಳಲ್ಲಿ ರಾಜ್ಯದ ವಿವಿಧ ಹಿಂದೂ ಪರ ಸಂಘಟನೆಗಳ 60 ಮಂದಿ ಸಕ್ರಿಯ ಕಾರ್ಯಕರ್ತರನ್ನು ಆತ ನೇಮಿಸಿದ್ದ ಎಂಬ ಆಘಾತಕಾರಿ ಸಂಗತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು :  ವಿಚಾರವಾದಿಗಳ ಹತ್ಯೆ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿದ್ದ ಜಾಲಕ್ಕೆ ಹಂತಕರನ್ನು ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ ಆಯ್ಕೆ ಮಾಡಿದ್ದು, ಆರು ವರ್ಷಗಳಲ್ಲಿ ರಾಜ್ಯದ ವಿವಿಧ ಹಿಂದೂ ಪರ ಸಂಘಟನೆಗಳ 60 ಮಂದಿ ಸಕ್ರಿಯ ಕಾರ್ಯಕರ್ತರನ್ನು ಆತ ನೇಮಿಸಿದ್ದ ಎಂಬ ಆಘಾತಕಾರಿ ಸಂಗತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ 60 ಮಂದಿಗೆ ಮಹಾರಾಷ್ಟ್ರದ ಸತಾರಾ, ಗೋವಾ, ಕರ್ನಾಟಕದ ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧೆಡೆ ಶಸ್ತ್ರಾಸ್ತ್ರ ತರಬೇತಿ ನಡೆದಿದ್ದು, ಧಾರವಾಡದ ಅರಣ್ಯ ಪ್ರದೇಶದಲ್ಲಿ ಪೆಟ್ರೋಲ್‌ ಬಾಂಬ್‌ ಹಾಗೂ ಬೆಳಗಾವಿ ಕಾಡಿನಲ್ಲಿ ಬಂದೂಕು ತರಬೇತಿ ನಡೆಸಿದ್ದ ಸ್ಥಳಗಳನ್ನು ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ತರಬೇತಿ ಪಡೆದವರ ಪೈಕಿ ಸುಮಾರು 25 ಜನರನ್ನು ಗುರುತಿಸಿ ವಿಚಾರಣೆ ನಡೆಸಿದ ಎಸ್‌ಐಟಿ, ಬಳಿಕ ಅವರ ಪ್ರೊಫೈಲ್‌ ಅನ್ನು ಆತಂರಿಕ ಭದ್ರತಾ ವಿಭಾಗ (ಐಎಸ್‌ಡಿ)ಗೆ ರವಾನಿಸಿದೆ. ಈಗ ಸೈದ್ಧಾಂತಿಕ ವಿರೋಧಿಗಳ ಜಾಲಕ್ಕೆ ಸಿಲುಕಿರುವ 60 ಜನರ ಕುರಿತು ಐಎಸ್‌ಡಿ ಮತ್ತು ಕೇಂದ್ರ ಗುಪ್ತದಳವು ಪ್ರತ್ಯೇಕವಾಗಿ ತನಿಖೆಗಿಳಿದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧರ್ಮೀಯರ ವಿನಾಶ:  ಹಿಂದೂ ವಿಚಾರಧಾರೆಗಳ ಟೀಕಾಕಾರರಾದ ಪ್ರಗತಿಪರ ಚಿಂತಕರು, ಪತ್ರಕರ್ತರು, ಸಾಹಿತಿಗಳು ಹಾಗೂ ಸಂಶೋಧಕರ ಹತ್ಯೆಗೆ ಸಂಸ್ಥೆಯೊಂದು ಹುಟ್ಟಿಕೊಂಡಿದ್ದು, ಇದಕ್ಕಾಗಿ ಅವರು ಅಧರ್ಮೀಯರ ವಿನಾಶ ಎಂಬ ಹೆಸರಿಟ್ಟಿದ್ದರು. ಈ ಕೃತ್ಯಕ್ಕಾಗಿ ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ ಹಾಗೂ ಉತ್ತರಪ್ರದೇಶ ಒಳಗೊಂಡಂತೆ ದೇಶದ ನಾನಾ ರಾಜ್ಯಗಳಲ್ಲಿ ಧರ್ಮಕ್ಕಾಗಿ ಜೀವ ಕೊಡಬಲ್ಲೆ ಎಂಬ ಮನಸ್ಥಿತಿಯ ಧೈರ್ಯಶಾಲಿಯುಳ್ಳ ವ್ಯಕ್ತಿಗಳನ್ನು ಆರಿಸಿ ಅಂತಹವರನ್ನು ದುಷ್ಕೃತ್ಯಕ್ಕೆ ಸಜ್ಜುಗೊಳಿಸುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ವಿವರಿಸಿದ್ದಾರೆ.

ಈ ಜಾಲಕ್ಕೆ ಕರ್ನಾಟಕದಲ್ಲಿ ನೇಮಕಾತಿ ಹೊಣೆಗಾರಿಕೆ ಹೊತ್ತಿದ್ದ ಶಿಕಾರಿಪುರದ ಸುಜಿತ್‌, ಆತ ರಾಜ್ಯದ ಉದ್ದಗಲಕ್ಕೂ ಸಂಚಾರ ನಡೆಸಿ ಬಲಪಂಥೀಯ ಸಿದ್ಧಾಂತವುಳ್ಳ ಕಾರ್ಯಕರ್ತರನ್ನು ಆಯ್ಕೆ ಮಾಡಿದ್ದ. ಬಳಿಕ ಅವರಿಗೆ ಮಹಾರಾಷ್ಟ್ರದ ಅಮೋಲ್‌ ಕಾಳೆ ಹಾಗೂ ಅಮಿತ್‌ ದೇಗ್ವೇಕರ್‌ ತರಬೇತಿ ಶಿಬಿರ ಆಯೋಜಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹೀಗೆ ನಡೆಯುತ್ತಿತ್ತು ನೇಮಕ:  ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲಕ್ಕೆ ಮೂರು ಹಂತದಲ್ಲಿ ಆಯ್ಕೆ ನಡೆದಿದೆ. ಮೊದಲ ಹಂತದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಸೇರಿಸಿ ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಈ ಸಭೆಯಲ್ಲಿ ಆ ಕಾರ್ಯಕರ್ತರ ಮೊಬೈಲ್‌ ಸಂಖ್ಯೆ ಸೇರಿ ಸ್ವವಿವರ ಸಂಗ್ರಹಿಸಲಾಗುತ್ತಿತ್ತು. ಅಲ್ಲದೆ, ಸಭೆಯಲ್ಲಿ ಸೂಕ್ಷ್ಮವಾಗಿ ಪ್ರತಿಯೊಬ್ಬರ ಚಲವಲನ ಮೇಲೆ ನಿಗಾವಹಿಸುವ ಅವರು, ಸೈದ್ಧಾಂತಿಕ ಬದ್ಧತೆವುಳ್ಳವರನ್ನು ಗುರುತಿಸಲಾಗುತ್ತಿತ್ತು. ಹೀಗೆ ಆಯ್ಕೆಯಾದವರ ಜತೆ ಸಭೆ ಮುಗಿದ ನಂತರ ಸಂಪರ್ಕ ಸಾಧಿಸಿ, ಅವರ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಎರಡನೇ ಹಂತದಲ್ಲಿ ಆಯ್ಕೆಯಾದವರಿಗೆ ಪ್ರತ್ಯೇಕವಾಗಿ ಧಾರ್ಮಿಕ ಸಭೆಗಳ ನಡೆಸಿ ಮತ್ತೆ ಅವರ ಸೈದ್ಧಾಂತಿಕ ಬದ್ಧತೆ ಪರೀಕ್ಷಿಸಲಾಗುತ್ತಿತ್ತು.

ಕೊನೆಗೆ ವಿಚಾರವಾದಿಗಳ ಹತ್ಯೆಗೆ ಯೋಜಿಸಿದಾಗ, ಆರಿಸಲಾದ ವ್ಯಕ್ತಿಗಳಿಗೆ ಕರೆ ಮಾಡಿ ಧರ್ಮ ಉಳಿಸಲು ನಿಮ್ಮಿಂದ ಒಂದು ಕೆಲಸವಾಗಬೇಕಿದೆ. ನೀವು ಮಾಡುವುದಾದರೆ ಯೋಚಿಸಿ ಹೇಳಿ ಎನ್ನುತ್ತಿದ್ದರು. ಈ ಮಾತಿಗೆ ಒಪ್ಪಿದರೆ, ಮೂರನೇ ಹಂತದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು. ಅಲ್ಲದೆ, ಆಯ್ಕೆಯಾದವರ ಪೈಕಿ ಕೆಲವರನ್ನು ಮಾತ್ರ ಹತ್ಯೆ ಕೃತ್ಯಕ್ಕೆ ಬಳಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಶುರಾಮನಿಗೆ ಸುಜಿತ್‌ ಭೇಷ್‌:

ಈ ಸಂಘಟನೆಯಲ್ಲಿ 2012ರಿಂದ ಶಿಕಾರಿಪುರದ ಸುಜಿತ್‌ ಸಕ್ರಿಯವಾಗಿದ್ದು, ಕರ್ನಾಟಕದಲ್ಲಿ ಸಂಘಟನೆಗೆ ನೇಮಕಾತಿ ಹೊಣೆಗಾರಿಕೆ ಹೊತ್ತಿದ್ದ. 2014ರಲ್ಲಿ ಸಿಂದಗಿ ಪಟ್ಟಣದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್‌ ವಾಗ್ಮೋರೆ ಬಂಧನವಾಗಿತ್ತು. ಆಗ ಪರಶುರಾಮ್‌ನ ತೋರಿದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸುಜಿತ್‌, ಅಂದೇ ಪರಶುರಾಮ್‌ ಜತೆ ಸ್ನೇಹ ಸಾಧಿಸಿದ್ದ. ಬಳಿಕ ಆತನಿಗೆ ತನ್ನ ಸಂಘಟನೆಯ ಕಾರ್ಯಕ್ರಮಗಳಿಗೆ ಆಹ್ವಾನಿಸಿದ ಸುಜಿತ್‌, ಅಲ್ಲಿ ಪರಶುರಾಮ್‌ನ ಸೈದ್ಧಾಂತಿಕ ಬದ್ಧತೆ ಪರೀಕ್ಷೆ ನಡೆಸಿದ್ದ. ಬಳಿಕ ಗೌರಿ ಹತ್ಯೆಗೆ ಸಂಚು ರೂಪಿಸಿದಾಗ ಸುಜಿತ್‌, ಶೂಟರ್‌ ಆಗಿ ಪರಶುರಾಮ್‌ನನ್ನು ಆಯ್ಕೆ ಮಾಡಿದ್ದ ಎಂದು ತಿಳಿದು ಬಂದಿದೆ.

ಅದೇ ರೀತಿ ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜನನ್ನು ಸಹ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಕೊಲೆಗೆ ಸುಜಿತ್‌ ಆಯ್ಕೆ ಮಾಡಿದ್ದ. ನವೀನ್‌ ಬಗ್ಗೆ ಸುಜಿತ್‌ಗೆ ಮಾಹಿತಿ ಕೊಟ್ಟಿದ್ದು ಗೋವಾ ಮೂಲದ ಧಾರ್ಮಿಕ ಸಂಸ್ಥೆಯ ಕರ್ನಾಟಕ ಶಾಖೆಯ ಪ್ರಮುಖ ಪದಾಧಿಕಾರಿ. ಬಳಿಕ ಗೋವಾದ ಪೋಂಡಾದಲ್ಲಿ ನಡೆದ ಕಾರ್ಯಕ್ರಮಕ್ಕೆ ನವೀನ್‌ನನ್ನು ಆಹ್ವಾನಿಸಿ, ಅಲ್ಲಿ ನವೀನ್‌ಗೆ ಭಾಷಣ ಮಾಡಲು ಅವಕಾಶ ನೀಡಲಾಗಿತ್ತು. ಆ ಸಭೆ ಮುಗಿದ ನಂತರ ನವೀನ್‌ ಸಂಪರ್ಕಕ್ಕೆ ಸುಜಿತ್‌ ನೇರವಾಗಿ ಬಂದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 

60 ಮಂದಿ ಪತ್ತೆ, 25 ಮಂದಿ ವಿಚಾರಣೆ:  ಗೌರಿ ಲಂಕೇಶ್‌ ಹತ್ಯೆ, ಭಗವಾನ್‌ ಕೊಲೆ ಸಂಚು ಕೃತ್ಯಗಳು ಬಯಲಾದ ನಂತರ ಎಸ್‌ಐಟಿ, ಅಮೋಲ್‌ ಕಾಳೆ ಹಾಗೂ ಸುಜಿತ್‌ ಹಿನ್ನೆಲೆ ಶೋಧಿಸಿದಾಗ ಬೃಹತ್‌ ನೇಮಕಾತಿ ಜಾಲ ಬೆಳಕಿಗೆ ಬಂದಿದೆ. 2012ರಿಂದ ರಾಜ್ಯದಲ್ಲಿ ಸುಜಿತ್‌, ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತರನು ಗುರುತಿಸಿ ಆಯ್ಕೆ ಮಾಡಿದ್ದ. ಆದರೆ ಒಂದೇ ಸಂಘಟನೆ ಅಥವಾ ಸಂಸ್ಥೆಗೆ ಸೇರಿದವರನ್ನು ಅವರು ಆರಿಸುತ್ತಿರಲಿಲ್ಲ. ಬಳಿಕ ಆಯ್ಕೆಯಾದವರಿಗೆ ತನ್ನ ಮಾತೃ ಸಂಸ್ಥೆಯ ಸದಸ್ಯತ್ವವನ್ನು ಸಹ ಆತ ಕೊಡಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಜಿತ್‌ ನೇಮಕಾತಿ ಮಾಡಿದ್ದ 60 ಮಂದಿ ಪೈಕಿ 25 ಮಂದಿ ಪ್ರೊಫೈಲ್‌ ಸಂಗ್ರಹಿಸಲಾಗಿದೆ. ಅವರ ಮೇಲೆ ಐಎಸ್‌ಡಿ ಹಾಗೂ ಗುಪ್ತದಳ ನಿಗಾ ವಹಿಸಲಿದ್ದು, ಹೊರ ರಾಜ್ಯಗಳ ವ್ಯಕ್ತಿಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೀಪಿಕಾ ಚಿತ್ರ ವಿರೋಧಿಸಿ ಪೆಟ್ರೋಲ್‌ ಬಾಂಬ್‌!

ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಬಂಧಿತರಾಗಿರುವ ಮಹಾರಾಷ್ಟ್ರದ ಮೂಲದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಹಾಗೂ ಶಿಕಾರಿಪುರದ ಸುಜಿತ್‌, 2017ರಲ್ಲಿ ವಿವಾದಕ್ಕೀಡಾಗಿದ್ದ ದೀಪಿಕಾ ಪಡುಕೋಣೆ ನಟನೆಯ ಪದ್ಮಾವತ್‌ ಹಿಂದಿ ಸಿನಿಮಾ ಬಿಡುಗಡೆ ವಿರೋಧಿಸಿದ್ದರು. ಹೋರಾಟದ ವೇಳೆ ಪೆಟ್ರೋಲ್‌ ಬಾಂಬ್‌ ದಾಳಿಗೆ ಸಂಚು ರೂಪಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಪದ್ಮಾವತ್‌ ಸಿನಿಮಾ ವಿರೋಧಿಸಿ 2017ರ ಜನವರಿಯಲ್ಲಿ ಪೆಟ್ರೋಲ್‌ ಬಾಂಬ್‌ ನಡೆಸಲು ಕಾಳೆ ತಂಡವು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಧಾರವಾಡ ಸಮೀಪದ ಅರಣ್ಯ ಪ್ರದೇಶದಲ್ಲಿ ಕೆಲವರಿಗೆ ಪೆಟ್ರೋಲ್‌ ಬಾಂಬ್‌ ತರಬೇತಿಯನ್ನೂ ಕೊಟ್ಟಿದ್ದರು. ಈ ಕುರಿತು ತನಿಖೆಯಲ್ಲಿ ಪುರಾವೆಗಳು ಲಭಿಸಿವೆ ಎಂದು ಎಸ್‌ಐಟಿ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

loader