ಶ್ರೀನಗರ(ಸೆ. 18): ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಉರಿ ಸೆಕ್ಟರ್'ನಲ್ಲಿ ಸೇನಾ ಕೇಂದ್ರದ ಮೇಲೆ ಉಗ್ರರು ಭಾನುವಾರ ಬೆಳಗ್ಗೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 17ಕ್ಕೂ ಹೆಚ್ಚು ಯೋಧರು ಬಲಿಯಾಗಿದ್ದಾರೆ. ಸೈನಿಕರು ಪ್ರತಿದಾಳಿ ನಡೆಸಿ ನಾಲ್ವರು ಉಗ್ರರನ್ನು ಹತ್ಯೆಗೈಯಲು ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಯೋಧರಿಗೆ ಗಾಯವಾಗಿದ್ದು, ಅವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ.

ಭಾನುವಾರ ನಸುಕಿನ 5.20ರ ವೇಳೆಯಲ್ಲಿ ಸೈನಿಕರ ವೇಷ ಧರಿಸಿ ನಾಲ್ವರು ಉಗ್ರರ ಗುಂಪು 12ನೇ ಸೇನಾ ಬ್ರಿಗೇಡ್ ಕೇಂದ್ರ ಕಚೇರಿಯನ್ನು ಪ್ರವೇಶಿಸಿ ಮನಬಂದಂತೆ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿತು. ಭಾರೀ ಶಸ್ತ್ರಾಸ್ತ್ರ ಹೊತ್ತಿದ್ದ ಉಗ್ರರು ದಾಳಿ ನಡೆಸಿದ ವೇಳೆ ಸೈನಿಕರು ಮಲಗಿದ್ದರೆನ್ನಲಾಗಿದೆ. ಹೀಗಾಗಿ, ಯೋಧರು ಪ್ರತಿರೋಧ ತೋರುವ ಮುನ್ನವೇ ಹಲವು ಮಂದಿ ಬಲಿಯಾಗಿಬಿಟ್ಟಿದ್ದರು.

ಬಳಿಕ ಐದಾರು ಗಂಟೆ ಕಾಲ ಯೋಧರು ಮತ್ತು ಉಗ್ರರ ನಡುವೆ ಐದಾರು ಗಂಟೆ ಕಾಲ ಗುಂಡಿನ ಕಾಳಗ ನಡೆದಿದೆ. ಯೋಧರು ನಾಲ್ವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು.

ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಡೀ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ನಿಗಾ ವಹಿಸಲಾಗಿದೆ. ಇದೇ ವೇಳೆ, ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ರಷ್ಯಾ ಹಾಗೂ ಅಮೆರಿಕ ಪ್ರವಾಸವನ್ನು ಮುಂದೂಡಿದ್ದಾರೆ.