ಬೆಂಗಳೂರು [ಜು.16]  :  ಶಕ್ತಿ ಕೇಂದ್ರ ವಿಧಾನಸೌಧದ ಶೌಚಾಲಯದಲ್ಲಿ ಗ್ರಂಥಾಲಯ ಸಿಬ್ಬಂದಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದ ಮೇಲೆ ಸಿಎಆರ್‌ (ಸಶಸ್ತ್ರ ಮೀಸಲು ಪಡೆ) ಸಬ್‌ಇನ್ಸ್‌ಪೆಕ್ಟರ್‌ ಸೇರಿ 10 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ವಿಧಾನಸೌಧದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್‌ಐ ಮಹದೇವ, ಎಎಸ್‌ಐ ಶಿವಲಿಂಗಯ್ಯ, ಹೆಡ್‌ಕಾನ್ಸ್‌ಟೇಬಲ್‌ ಜಕಾರಿಯಸ್‌, ಲಕ್ಷ್ಮಮ್ಮ, ಕಾನ್‌ಸ್ಟೇಬಲ್‌ಗಳಾದ ಯಲ್ಲಪ್ಪ, ಆನಂದನಾಯ್‌್ಕ, ಕೆನೆತ್‌, ಸವಿತಾ ಹಲಕಾವಟಿ, ಸೀಮಾ, ಎಂ.ನಿವೇದಿತಾ ಅವರನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದಡಿ ಅಮಾತನಗೊಳಿಸಿ ಸಿಎಆರ್‌ ಜಂಟಿ ಪೊಲೀಸ್‌ ಆಯುಕ್ತ ಟಿ.ಆರ್‌.ಸುರೇಶ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಜೂ.24ರಂದು ವಿಧಾನಸೌಧ ಪ್ರವೇಶ ಮಾಡಿದ್ದ ಗ್ರಂಥಾಲಯ ಸಿಬ್ಬಂದಿ ರೇವಣ್ಣ ಕುಮಾರ್‌ ಶೌಚಾಲಯಕ್ಕೆ ತೆರಳಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದರು.

ವಿಧಾನಸೌಧ ಭದ್ರತೆಯ ‘ಎ’ ಪಾಳಿಯಲ್ಲಿ ಅಂಬೇಡ್ಕರ್‌ ದ್ವಾರ ಮತ್ತು ಪೂರ್ವ ದ್ವಾರಗಳಲ್ಲಿ 10 ಮಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರೇವಣ್ಣ ವಿಧಾನಸೌಧ ಪ್ರವೇಶಿಸಿರುವ ಬಗ್ಗೆ ನೋಂದಣಿ ಪುಸ್ತಕದಲ್ಲಿ ನಮೂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ದ್ವಾರಗಳಲ್ಲಿ ಸರಿಯಾಗಿ ಗುರುತಿನ ಚೀಟಿ ಮತ್ತು ಪಾಸ್‌ಗಳನ್ನು ಪರಿಶೀಲಿಸಿಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ವಿಧಾನಸೌಧ ಪ್ರವೇಶಿಸುವಾಗ ಆತನ ಬಳಿ ಡಿಪಿಎಆರ್‌ ನೀಡಿರುವ ಪಾಸ್‌ ಆಗಲಿ ಅಥವಾ ಸಚಿವಾಲಯ ನೌಕರರ ಐಡಿ ಇಲ್ಲದೆ ಇದ್ದರೂ ವಿಧಾನಸೌಧ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಸರಿಯಾಗಿ ತಪಾಸಣೆ ನಡೆಸದ ಕಾರಣ ಈ ಅವಘಡ ಸಂಭವಿಸಿದೆ. ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯ ನಿರ್ಲಕ್ಷ್ಯತೆ, ಬೇಜವಾಬ್ದಾರಿ ಹಾಗೂ ಶಿಸ್ತಿನ ಇಲಾಖೆ ಘನತೆ ಗೌರವಗಳಿಗೆ ಕುಂದುಬರುವಂತೆ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಸಿಎಆರ್‌ ಜಂಟಿ ಪೊಲೀಸ್‌ ಆಯುಕ್ತ ಟಿ.ಆರ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಗ್ರಂಥಾಲಯ ಸಿಬ್ಬಂದಿಯಾಗಿರುವ ಚಿಕ್ಕಬಳ್ಳಾಪುರದ ರೇವಣ್ಣ ಕುಮಾರ್‌ ಎಂಬ ವ್ಯಕ್ತಿ ವೇತನ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಜೂ.24ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಬಂದಿದ್ದರು. ವಿಧಾನಸೌಧದ 3ನೇ ಮಹಡಿಯ 1ನೇ ಶೌಚಾಲಯದಲ್ಲಿ ರೇವಣ್ಣಕುಮಾರ್‌ ಬ್ಲೇಡ್‌ನಿಂದ ಕುತ್ತಿಗೆ, ಕೈ ಕೊಯ್ದುಕೊಂಡು ಬಿದ್ದಿದ್ದ. ಕೂಡಲೇ ಆತನನ್ನು ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.