ನವದೆಹಲಿ(ಜ.27): ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಸಕ್ರೀಯ ರಾಜಕಾರಣಕ್ಕೆ ಕರೆತಂದು ಕಾಂಗ್ರೆಸ್ ಸಂಭ್ರಮಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಈ ಪಡಿಯಚ್ಚು ತನಗೆ ಮತ ತಂದು ಕೊಡಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ಪಕ್ಷದ್ದು.

ಅಲ್ಲದೇ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಪ್ರಿಯಾಂಕ ನೆರವಾಗಬಲ್ಲರು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಪ್ರಿಯಾಂಕ ಆಗಮನದಿಂದ ಬಿಜೆಪಿಗೆ ಭಯವೇನೂ ಆಗಿಲ್ಲ ಎಂಬುದಕ್ಕೆ ಸುಬ್ರಮಣಿಯನ್ ಸ್ವಾಮಿ ಅವರ ಈ ಹೇಳಿಕೆಯೇ ಸಾಕ್ಷಿ.

ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬೈಪೋಲಾರ್ ಮಾನಸಿಕ ಸಮಸ್ಯೆ ಇದ್ದು, ಅವರು ಜನರನ್ನು ಥಳಿಸುತ್ತಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 

‘ಪ್ರಿಯಾಂಕಾ ಮಾನಸಿಕ ಸಮಸ್ಯೆ - ಬೈಪೋಲಾರ್ ನಿಂದ ಬಳಲುತ್ತಿದ್ದಾರೆ. ಅವರು ಜನರನ್ನು ಥಳಿಸುತ್ತಾರೆ. ಅವರ ಕಾಯಿಲೆಯೇ ಅವರ ಸಾರ್ವಜನಿಕ ಜೀವನಕ್ಕೆ ಮುಳುವಾಗಲಿದೆ.  ಆಕೆ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಸ್ವಾಮಿ ಹೇಳಿದ್ದಾರೆ.

ಇನ್ನು ಸ್ವಾಮಿ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ್ದು, ಬಿಜೆಪಿಯ ಬುದ್ದಿಜೀವಿ ಎಂದೇ ಗುರುತಿಸಲ್ಪಡುವ ಸ್ವಾಮಿ ಅವರಿಂದ ಇಂತಹ ಕೀಳು ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ಹರಿಹಾಯ್ದಿದೆ.