ಸಾಂಸ್ಕೃತಿಕ ನಗರಿ ಮೈಸೂರಿನ 18ನೇ ಪೊಲೀಸ್ ಆಯುಕ್ತರಾಗಿ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ (ಡಾ.ಎ.ಎಸ್. ರಾವ್) ಅವರು ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಮೈಸೂರು(ಅ.25): ಸಾಂಸ್ಕೃತಿಕ ನಗರಿ ಮೈಸೂರಿನ 18ನೇ ಪೊಲೀಸ್ ಆಯುಕ್ತರಾಗಿ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ (ಡಾ.ಎ.ಎಸ್. ರಾವ್) ಅವರು ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಈ ಹಿಂದಿನ ಆಯುಕ್ತ ಬಿ. ದಯಾನಂದ ಅವರ ವರ್ಗಾವಣೆಯಾದ ಬಳಿಕ ಪ್ರಭಾರ ಆಯುಕ್ತರಾಗಿದ್ದ ದಕ್ಷಿಣ ವಲಯದ ಐಜಿಪಿ ಬಿ.ಕೆ. ಸಿಂಗ್ ಅವರು ಡಾ.ಎ.ಎಸ್. ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಹೂಗುಚ್ಛ ನೀಡಿ ಶುಭ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಪೊಲೀಸ್ ಆಯುಕ್ತ ಡಾ.ಎ.ಎಸ್. ರಾವ್ ಅವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲಸ ಮಾಡುವುದು ದೊಡ್ಡ ಜವಾಬ್ದಾರಿ. ಮುಖ್ಯಮಂತ್ರಿಯವರ ತವರು ಜಿಲ್ಲೆಯಾಗಿರುವುದರಿಂದ ಸವಾಲಿನ ಕೆಲಸವಾಗಿದೆ. ಈ ಹಿಂದೆ ಆಯುಕ್ತರಾಗಿ ಐಜಿಪಿ ದರ್ಜೆ ಅಧಿಕಾರಿಗಳು ಆಗಿದ್ದರು. ಸರ್ಕಾರ ಈಗ ಡಿಐಜಿ ಹುದ್ದೆಯಲ್ಲಿರುವ ನನ್ನನ್ನು ನೇಮಿಸಿದೆ ಎಂದರು.
ಉಡುಪಿ, ಬೀದರ್, ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿ, ಸಿಬಿಐನಲ್ಲಿ ಭ್ರಷ್ಟಾಚಾರ ನಿಗ್ರಹ ವಿಭಾಗದಲ್ಲಿ ೫ ವರ್ಷ ಸೇವೆ ಸಲ್ಲಿಸಿ ಈಗ ಮೈಸೂರು ಪೊಲೀಸ್ ಆಯುಕ್ತರಾಗಿ ಬಂದಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ೧೫ ವರ್ಷಗಳ ಸೇವಾನುಭವ ಇದೆ ಎಂದು ಅವರು ತಿಳಿಸಿದರು.
ಈ ಹಿಂದಿನ ಪೊಲೀಸ್ ಆಯುಕ್ತರು ಮಾಡಿರುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಜೊತೆಗೆ ನನ್ನದೆಯಾದ ಕೊಡುಗೆ ಸಹ ನೀಡುತ್ತೇನೆ. ಮೈಸೂರಿನ ಪೊಲೀಸರ ಸೇವೆಯಲ್ಲಿ ಪಾರದರ್ಶಕತೆ ಇರುತ್ತದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ನಂಬಿಕೆ ಹೆಚ್ಚಿಸುವ ಕೆಲಸ ಮಾಡಲಾಗುವುದು. ಯಾವುದೇ ದೂರು ಬಂದರೂ ಕಾಲಮಿತಿಯೊಳಗೆ ಕ್ರಮ ವಹಿಸಲಾಗುವುದು. ಯಾವುದೇ ಜಾತಿ, ಮತ, ಬೇಧಭಾವ ಇಲ್ಲದೆ ಪೊಲೀಸರು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನದ ಮೂಲಕ ಜನರಿಂದ ಸಲಹೆಗಳನ್ನು ಪಡೆದು ಅಳವಡಿಸಲಾಗುವುದು. ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸಲಾಗುವುದು. ನಾಗರಿಕ ಸಮಿತಿ ರಚಿಸಲಾಗುವುದು. ಅಪರಾಧ ನಿಯಂತ್ರಣ ಹಾಗೂ ಪತ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ವೀಲೆನ್ಸ್ ಕ್ಯಾಮರಾಗಳ ಉಪಯೋಗ ಬಳಸಿಕೊಳ್ಳಲಾಗುವುದು ಎಂದರು.
ರೌಡಿಗಳ ವಿರುದ್ಧ ಕ್ರಮ:
ಮೈಸೂರು ನಗರದಲ್ಲಿ ಯಾವುದೇ ಕಾರಣಕ್ಕೂ ರೌಡಿಗಳ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ವಹಿಸಲಾಗುವುದು. ಅಪರಾಧ ನಿಯಂತ್ರಣಕ್ಕೆ ಒತ್ತು ನೀಡಲಾಗುವುದು. ಕೋಮುವಾದಿ, ರೌಡಿಗಳ ಚಟುವಟಿಕೆ ಮೇಲೆ ನಿಗಾವಹಿಸಲಾಗುವುದು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಹ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಡಾ.ಎ.ಎಸ್. ರಾವ್ ತಿಳಿಸಿದರು.
