ಬೆಂಗಳೂರು(ಜ.25): ಭಾರತವೇಕೆ ಭಾರತವಾಗಿ ಉಳಿದಿದೆ?. ಈ ಪ್ರಶ್ನೆ ನಮ್ಮನ್ನಾಳಿದ ಆಂಗ್ಲರಿಗೆ ಕೊನೆವರೆಗೂ ಅರ್ಥವಾಗದ ಸತ್ಯ. ಈ ಸತ್ಯ ಇಂದಿಗೂ ವಿಶ್ವಕ್ಕೆ ಬಹುತೇಕವಾಗಿ ಅರ್ಥವಾಗಿಲ್ಲ.

130 ಕೋಟಿಗೂ ಅಧಿಕ ಜನರಿರುವ, ಹಲವು ಭಾಷೆ, ಹಲವು ಧರ್ಮ, ಹಲವು ಸಂಸ್ಕೃತಿ, ಆಚಾರ ವಿಚಾರದಲ್ಲಿ ವ್ಯತ್ಯಾಸ ಇಷ್ಟೆಲ್ಲ ಇದ್ದೂ ಭಾರತ ಐಕ್ಯವಾಗಿರುವುದೇಕೆ?. ಈ ಪ್ರಶ್ನೆಗೆ ಭಾಷೆಯ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜನಾಂಗದ ಹೆಸರಲ್ಲಿ ಬಡಿದಾಡಿ ಹೋಳಾಗಿ ಚಿಕ್ಕ ಚಿಕ್ಕ ರಾಷ್ಟ್ರಗಳಲ್ಲಿ ಬದುಕುತ್ತಿರುವ ಜನರಿಗೆ ಅರ್ಥವಾಗುವುದಾದರೂ ಹೇಗೆ ಹೇಳಿ?.

ಆದರೆ ಭಾರತೀಯರ ಬಳಿ ಇದಕ್ಕೆಲ್ಲ ಉತ್ತರವಿದೆ. ಅದೂ ಬಹಳ ಸರಳ ಉತ್ತರ ಸಿದ್ಧವಿದೆ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ..’ ನಿನ್ನ ಕರ್ತವ್ಯವನ್ನು ನೀನು ಮಾಡು ಫಲಾಪೇಕ್ಷೆಯನ್ನು ದೇವರಿಗೆ ಬಿಡು. ಇದು ಭಾರತೀಯರ ಆತ್ಮದೊಂದಿಗೆ ಬೆರೆತಿರುವ ಸತ್ಯ. ಧರ್ಮ, ಜಾತಿ, ಭಾಷೆ, ಆಹಾರ, ಸಂಸ್ಕೃತಿ ಇವೆಲ್ಲ ನಂತರದ್ದು. ದುಡಿಮೆಗೆ ಭಾರತದಲ್ಲಿ ಮೊದಲ ಪ್ರಾಶಸ್ತ್ಯ.

ಅದರಂತೆ ಭಾರತೀಯರು ವಿಶ್ವದಲ್ಲೇ ಅತ್ಯಂತ ಕಠಿಣ ಪರಿಶ್ರಮದ ದುಡಿಮೆಗಾರರು ಎಂಬುದನ್ನು ನೂತನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಉದ್ಯೋಗಿ ನಿರ್ವಹಣೆ ಸಂಸ್ಥೆಯಾದ ಕ್ರೊನೊಸ್ ಇನ್‌ಕಾರ್ಪೋರೇಟೆಡ್ ಈ ಸಂಶೋಧನಾ ವರದಿಯನ್ನು ಬಹಿರಂಗಪಡಿಸಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ ಶೇ.69ರಷ್ಟು ಭಾರತೀಯರು ತಮ್ಮ ಕೆಲಸದಲ್ಲಿ ಅತ್ಯಂತ ಪ್ರಾಮಾಣಿಕರಾಗಿದ್ದು, ಶ್ರದ್ಧೆಯಿಂದ ತಮ್ಮ ಕೆಲಸವನ್ನು ಮಾಡುತ್ತಾರೆ. ಕೆಲಸದ ಅವಧಿ, ವೇತನ ಇವೆಲ್ಲಕ್ಕೂ ಮಿಗಿಲಾಗಿ ಭಾರತೀಯರು ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ.

ಭಾರತದ ನಂತರದ ಸ್ಥಾನ ಮೆಕ್ಸಿಕೋ ಪಾಲಾಗಿದ್ದು, ಇಲ್ಲಿನ ಶೇ.43ರಷ್ಟು ಜನ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸುತ್ತಾರೆ. ಅಮೆರಿಕ ಶೇ.27, ಆಸ್ಟ್ರೆಲೀಯಾ ಶೇ.19, ಫ್ರಾನ್ಸ್ ಶೇ.17 ರಷ್ಟು ಜನ ಮಾತ್ರ ನೈಜ ಕೆಲಸಗಾರರಾಗಿದ್ದಾರೆ.

ಭಾರತೀಯರು ಕಷ್ಟ ಸಹಿಷ್ಣುಗಳಾಗಿದ್ದು, ತಮಗೆ ವಹಿಸಿದ ಕೆಲಸವನ್ನು ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಮೀರಿ ಅಚ್ಚುಕಟ್ಟಾಗಿ ಮುಗಿಸುತ್ತಾರೆ ಎಂದು ಸಂಶೋಧನಾ ವರದಿ ತಿಳಿಸಿದೆ.