ಇಸ್ಲಾಮಾಬಾದ್(ಮಾ.30): ಸುಮ್ನೆ ಇಷ್ಟುದ್ದ ಗೆರೆ ಎಳೆದು ಅದು ನಿಂದು, ಇದು ನಂದು ಅಂದಂತೆ ರಾಷ್ಟ್ರವೊಂದನ್ನು ಇಬ್ಭಾಗ ಮಾಡಬಹುದೇ ಹೊರತು ಸಂಸ್ಕೃತಿಯನ್ನಲ್ಲ, ಮನಸ್ಸುಗಳನ್ನಲ್ಲ, ಮಾನವೀಯತೆಯನ್ನಲ್ಲ.

ಮುಸ್ಲಿಂ ರಾಷ್ಟ್ರ ನಿರ್ಮಾಣ ಮಾಡುವ ಮೂಲಕ ಇಸ್ಲಾಂ ವಿಸ್ತರಣೆಯ ಗುರಿ ಇಟ್ಟುಕೊಂಡು ಹುಟ್ಟಿಕೊಂಡ ಪಾಕಿಸ್ತಾನ, ಭಾರತದಿಂದ ಪಡೆದದ್ದು ಕೇವಲ ನೆಲ ಮಾತ್ರವಲ್ಲ. ಬದಲಿಗೆ ನೆಲದೊಂದಿಗೆ ಸಮ್ಮಿಳಿತವಾಗಿರುವ ಸಂಸ್ಕೃತಿಯನ್ನೂ ಕೂಡ ಎಂಬುದಕ್ಕೆ ಈ ಕೆಳಗಿನ ವಿಡಿಯೋನೇ ಸಾಕ್ಷಿ.

ಇಸ್ಲಾಮಾಬಾದ್‌ನ ಕಾಯದ್-ಎ-ಆಜಂ ವಿವಿಯಲ್ಲಿ ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಿಸಿದ್ದು, ವಿದ್ಯಾರ್ಥಿಗಳು ಪರಸ್ಪರ ಬಣ್ಣ ಎರಚಿ ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿವಿ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಜಮಾವಣೆಗೊಂಡು ಹೋಳಿ ಹಬ್ಬ ಆಚರಿಸಿದ್ದಲ್ಲದೇ, ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೋಗೆ ಭಾರತವೂ ಸೇರಿದಂತೆ ವಿಶ್ವದ ಅನೇಕ ಕಡೆಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.