ಮಂಗಳೂರು(ಅ.24): ಹಾಜರಾತಿ ಪುಸ್ತಕ ಹರಿದು, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ಮಂಗಳೂರಿನ ವಿದ್ಯಾರ್ಥಿ ಮಹಮ್ಮದ್ ಶಹನಾಜ್ ತಲೆಮರೆಸಿಕೊಂಡಿದ್ದಾನೆ.

ಗುರುವಾರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದ ಈತನ ಪತ್ತೆಗೆ ಪಾಂಡೇಶ್ವರ ಪೊಲೀಸರು ಮೂರು ದಿನಗಳಿಂದ ಶೋಧ ನಡೆಸಿದ್ದಾರೆ. ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿಂದೆ ವಿದ್ಯಾರ್ಥಿ ಕೆಲ ಸಮಾಜಬಾಹಿರ ಕೃತ್ಯದಲ್ಲೂ ತೊಡಗಿದ್ದ ಎಂಬ ಆರೋಪ ಹೊಂದಿದ್ದ. ಹಾಲ್ ಟಿಕೆಟ್ ನೀಡದ್ದಕ್ಕೆ ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ಪುಂಡ ವಿದ್ಯಾರ್ಥಿಗೆ ಮೂವರು ಸಹ ವಿದ್ಯಾರ್ಥಿಗಳೂ ನೆರವು ನೀಡಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ.

ಸಿಸಿ ಟಿವಿ ದೃಶ್ಯಾವಳಿ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ. ಘಟನೆಯನ್ನು ಖಂಡಿಸಿ ಮತ್ತು ಆರೋಪಿ ವಿದ್ಯಾರ್ಥಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮಿಲಾಗ್ರಿಸ್ ಕಾಲೇಜಿನಲ್ಲಿ ಶಿಕ್ಷಕರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.