ಬೆಳಗಾವಿ (ಫೆ.09): ಸೈಕಲ್ ತಾಕಿಸಿದ ಎಂಬ ಕಾರಣಕ್ಕೆ ಮೂವರು ವಿದ್ಯಾರ್ಥಿಗಳು ಸೇರಿ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲೇ ಅಸುನೀಗಿದ ಘಟನೆ ಬುಧವಾರ ಬೆಳಗಾವಿ ನಗರದ ಬಿ.ಕೆ. ಮಾಡೆಲ್ ಸ್ಕೂಲ್ ಆವರಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾಲಾರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿರುವ ಕ್ಯಾಂಪ್ ಠಾಣೆಯ ಪೊಲೀಸರು ಬಾಲ ನ್ಯಾಯಮಂಡಳಿ ವಶಕ್ಕೆ ನೀಡಿದ್ದಾರೆ.

ಬೆಳಗಾವಿ (ಫೆ.09): ಸೈಕಲ್ ತಾಕಿಸಿದ ಎಂಬ ಕಾರಣಕ್ಕೆ ಮೂವರು ವಿದ್ಯಾರ್ಥಿಗಳು ಸೇರಿ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲೇ ಅಸುನೀಗಿದ ಘಟನೆ ಬುಧವಾರ ಬೆಳಗಾವಿ ನಗರದ ಬಿ.ಕೆ. ಮಾಡೆಲ್ ಸ್ಕೂಲ್ ಆವರಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾಲಾರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿರುವ ಕ್ಯಾಂಪ್ ಠಾಣೆಯ ಪೊಲೀಸರು ಬಾಲ ನ್ಯಾಯಮಂಡಳಿ ವಶಕ್ಕೆ ನೀಡಿದ್ದಾರೆ.

ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿ ಪ್ರಶಾಂತ ಹುಲ್ಮನಿ ಬುಧವಾರ ಶಾಲಾ ಆವರಣದಲ್ಲಿ ನಿಗೂಢ ಸಾವಿಗೀಡಾಗಿದ್ದು. ಹೀಗಾಗಿ ಪೋಷಕರು ಗುರುವಾರ ಶಾಲೆಗೆ ಆಗಮಿಸಿ ಪ್ರಕರಣವನ್ನು ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಶಾಲೆಯ ಎದುರು ಪ್ರತಿಭಟನೆಯನ್ನೂ ನಡೆಸಿದರು. ಇದೇ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಶಾಲೆಯ ಕಿಟಕಿಯ ಗಾಜು ಖಜಂಗೊಂಡಿವೆ. ಇದರಿಂದಾಗಿ ಕೆಲಕಾಲ ಶಾಲೆಯ ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ಕ್ಯಾಂಪ್ ಪ್ರದೇಶದ ಬಿ.ಕೆ. ಮಾಡೆಲ್ ೮ನೇ ತರಗತಿ ವಿದ್ಯಾರ್ಥಿ ಪ್ರಶಾಂತ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಶಾಲೆಯ ಆಟದ ಮೈದಾನದಲ್ಲಿ ಬಿದ್ದಿದ್ದ. ಇದನ್ನು ಕಂಡ ಕೆಲವರು ಶಾಲೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಶಾಲಾ ಸಿಬ್ಬಂದಿ ಕೂಡಲೇ ಆ ಮಗುವನ್ನು ಸಮೀಪದ ದಂಡುಮಂಡಳಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಬಾಲಕ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ ಬಳಿಕ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಎಲ್ಲ ಮುಗಿದ ಮೇಲೆ ನಮಗೆ ನಮ್ಮ ಮಗುವಿನ ಸಾವಿನ ವಿಚಾರನ್ನು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದರು.

ಶಾಲೆ ಬಿಟ್ಟ ನಂತರ ಸೈಕಲ್ ವಿಚಾರವಾಗಿ ಇತರೆ ವಿದ್ಯಾರ್ಥಿಗಳು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಬೆದರಿಯಿಂದ ಆತ ಮೃತಪಟ್ಟಿದ್ದಾನೆ. ಇದಕ್ಕೆ ಶಾಲಾ ಸಿಬ್ಬಂದಿ, ಆಡಳಿತ ಮಂಡಳಿಯೂ ಹೊಣೆಯಾಗಿದೆ. ಹಾಗಾಗಿ, ಮಗುವಿನ ನಿಗೂಢ ಸಾವಿನ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಮಗುವಿನ ಸಾವಿಗೆ ಶಾಲಾ ಸಿಬ್ಬಂದಿಯೂ ಕಾರಣರಾಗಿದ್ದಾರೆ ಎಂದು ಆರೋಪಿಸಿ ಪೋಷಕರು, ಶಾಲೆಯ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತರು ಶಾಲೆಯ ಮೇಲೆ ಕಲ್ಲು ತೂರಿದ್ದರಿಂದ ಕಿಟಕಿಯ ಗಾಜುಗಳು ಪುಡಿ ಪುಡಿಯಾದವು. ತಪ್ಪಿತಸ್ಥರ ವಿರುದ್ಧ ಶಿಸ್ತು ಕೈಗೊಳ್ಳದ ಹೊರತು ಸ್ಥಳಬಿಟ್ಟು ಕದಲುವುದಿಲ್ಲ. ಈ ಕುರಿತು ಲಿಖಿತವಾಗಿ ಭರವಸೆ ಕೊಡಬೇಕು ಎಂದು ಪೋಷಕರು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ಆಗ ಸಕಾಲಕ್ಕೆ ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಸಂದರ್ಭದಲ್ಲಿ ಎಸಿಪಿ ಶಿವಕುಮಾರ ಅವರು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನೆಕಾರರ ಮನವೊಲಿಸಿದರು. ಬಳಿಕ ಶಾಲೆಯ ಮುಖ್ಯೋಪಾಧ್ಯಾಯರು ಈ ಪ್ರಕರಣದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸ್ ತನಿಖೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಂಪೂರ್ಣ ಸಹಕಾರ ಕೊಡಲಿದೆ ಎಂದು ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ನಂತರ ಮೃತ ಬಾಲಕನ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಿ, ಶಾಲೆಗೆ ರಜೆ ಘೋಷಿಸಲಾಯಿತು.

ಬಿಇಒ ಭೇಟಿ:

ಪೋಷಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ನಾಲತವಾಡ, ಬಿ.ಕೆ.ಮಾಡೆಲ್ ಶಾಲೆಯ ಆವರಣದಲ್ಲಿ ಮಗುವಿನ ಸಾವಿನ ಕುರಿತು ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯಲಿದೆ. ಪೊಲೀಸರ ತನಿಖೆ ಆಧರಿಸಿ, ಸರ್ಕಾರದಿಂದ ಮಗುವಿನ ಪಾಲಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಅತಿ ಬಡತನದ ಕುಟುಂಬವಿದ್ದಲ್ಲಿ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ಧನಕ್ಕೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

ಬಿ.ಕೆ. ಮಾಡೆಲ್ ಶಾಲೆಯ ವಿದ್ಯಾರ್ಥಿ ಸಾವಿಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಭದ್ರತೆ ಒದಗಿಸಬೇಕು. ಶಾಲಾ ಆವರಣಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಡಳಿತ ಮಂಡಳಿ ತೆರವುಗೊಳಿಸುವ ಮೂಲಕ ನಿರ್ಲಕ್ಷ್ಯವಹಿಸಿದೆ.

- ಆರ್.ಪಿ. ಪಾಟೀಲ, ವಕೀಲ

ಬಾಲಕನ ಸಾವು ನೋವು ತಂದಿದೆ. ಇದರ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಈ ತನಿಖೆಗೆ ಶಾಲಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸಂಪೂರ್ಣವಾಗಿ ಸಹಕರಿಸಲಿದೆ. ಇನ್ನು ಮೃತ ಬಾಲಕನ ಕುಟುಂಬಕ್ಕೆ ನೀಡಬಹುದಾದ ಪರಿಹಾರದ ಬಗ್ಗೆ ಆಡಳಿತ ಮಂಡಳಿ ಚರ್ಚಿಸಿ ನಿರ್ಣಯಿಸಲಿದೆ.

- ಅಶೋಕ ದೇಸಾಯಿ, ಮುಖ್ಯಾಧ್ಯಾಪಕ