ಆತ ಕಷ್ಟ ಪಟ್ಟು ಓದಿ ಹೆಚ್ಚು ಅಂಕ ಪಡೆದಿದ್ದ ಗ್ರಾಮೀಣ ವಿದ್ಯಾರ್ಥಿ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮೈಸೂರು ವಿವಿ ಘಟಿಕೋತ್ಸವದಲ್ಲಿ ಬಂಗಾರದ ಪದಕ ಪಡೆಯಬೇಕಿತ್ತು. ಆದರೆ ಯಾರದೋ ತಪ್ಪಿಗೆ ಆತ ಪಡೆಯಬೇಕಿದ್ದ ಗೋಲ್ಡ್ ಮೆಡಲ್ ಬೇರೊಬ್ಬರ ಪಾಲಾಗಿದೆ. ಯಾರು ಆ ವಿದ್ಯಾರ್ಥಿ? ಅಸಲಿಗೆ ಆಗಿದ್ದೇನು? ಇಲ್ಲಿದೆ ವಿವರ.

ಶಿವಮೊಗ್ಗ(ಮೇ.27): ಆತ ಕಷ್ಟ ಪಟ್ಟು ಓದಿ ಹೆಚ್ಚು ಅಂಕ ಪಡೆದಿದ್ದ ಗ್ರಾಮೀಣ ವಿದ್ಯಾರ್ಥಿ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮೈಸೂರು ವಿವಿ ಘಟಿಕೋತ್ಸವದಲ್ಲಿ ಬಂಗಾರದ ಪದಕ ಪಡೆಯಬೇಕಿತ್ತು. ಆದರೆ ಯಾರದೋ ತಪ್ಪಿಗೆ ಆತ ಪಡೆಯಬೇಕಿದ್ದ ಗೋಲ್ಡ್ ಮೆಡಲ್ ಬೇರೊಬ್ಬರ ಪಾಲಾಗಿದೆ. ಯಾರು ಆ ವಿದ್ಯಾರ್ಥಿ? ಅಸಲಿಗೆ ಆಗಿದ್ದೇನು? ಇಲ್ಲಿದೆ ವಿವರ.

ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಆನವೇರಿ ಗ್ರಾಮದ ಸೂರ್ಯತೇಜ, ಮೈಸೂರಿನ ಮಹಾಜನ ಕಾಲೇಜಿನಲ್ಲಿ 2016 ರ ಜೂನ್ ಅಂತ್ಯಕ್ಕೆ 10 ಸೆಮಿಸ್ಟರ್'ಗಳ MTA ಕೋರ್ಸ್​ ಮುಗಿಸಿದ್ದ. ಮೊದಲ 9 ಸೆಮಿಸ್ಟರ್'ಗಳಲ್ಲೂ ಇಡೀ ಕಾಲೇಜಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದ ಸೂರ್ಯತೇಜ 10ನೇ ಸೆಮಿಸ್ಟರ್​ನಲ್ಲಿ ಎರಡನೇ ಸ್ಥಾನ ಪಡೆದಿದ್ದ. ವಿವಿ ನೀಡಿದ ಅಂಕಪಟ್ಟಿಯಲ್ಲಿ ಈತನ ಪರ್ಸಂಟೇಜ್ 70.45 ಎಂದು ನಮೂದಾಗಿದ್ದು, ಒಟ್ಟು ಅಂಕಗಳನ್ನು ಲೆಕ್ಕಮಾಡಿದಾಗ 77.9 ಪರ್ಸಂಟೇಜ್ ಆಗಿತ್ತು. ಇದರಿಂದ ಗಾಬರಿಗೆ ಬಿದ್ದ ವಿದ್ಯಾರ್ಥಿ ಸೂರ್ಯತೇಜ ವಿವಿಯ ಪರೀಕ್ಷಾಂಗ ವಿಭಾಗಕ್ಕೆ ಅಂಕಪಟ್ಟಿಯ ಪರ್ಸಂಟೇಜ್ ವ್ಯತ್ಯಾಸ ಸರಿಪಡಿಸಿಕೊಡುವಂತೆ ಅರ್ಜಿ ನೀಡಿದ್ದ. ಕೊನೆಗೂ ತನ್ನ ತಪ್ಪನ್ನು ಸರಿಪಡಿಸಿಕೊಂಡ ವಿವಿ ಹಳೆಯ ಅಂಕಪಟ್ಟಿ ಹಿಂಪಡೆದು, 77.9 ಪರ್ಸಂಟೇಜಿನ ಹೊಸ ಅಂಕಪಟ್ಟಿಯನ್ನು ನೀಡಿತು. ಈ ವೇಳೆಗಾಗಲೇ ಸೂರ್ಯ ತೇಜನ ರ‍್ಯಾಂಕ್ ಕನಸು ನುಚ್ಚು ನೂರಾಗಿತ್ತು. ಯಾಕಂದ್ರೆ 77.3 ಪರ್ಸಂಟೇಜ್ ಪಡೆದ ಶರತ್ ಚಿನ್ನಪ್ಪ ಎಂಬ ವಿದ್ಯಾರ್ಥಿಗೆ MTA ವಿಭಾಗದಲ್ಲಿ ಮೊದಲ ರ‍್ಯಾಂಕ್ ಜೊತೆಗೆ ಬಂಗಾರದ ಪದಕವನ್ನು ವಿವಿ ಪ್ರದಾನ ಮಾಡಿತ್ತು. 

ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಅನುಮಾನದ ಹುತ್ತ ಹುಟ್ಟಿಕೊಳ್ಳುತ್ತದೆ. 77.3 ಪರ್ಸಂಟೇಜ್​ನೊಂದಿಗೆ ಗೋಲ್ಡ್ ಮೆಡಲ್ ಪಡೆದಿದ್ದ ಶರತ್ ಚಿನ್ನಪ್ಪ ಮೈಸೂರು ವಿವಿಯ ಪ್ರಾಧ್ಯಾಪಕರೊಬ್ಬರ ಪುತ್ರ. ಶರತ್​'ಗೆ ರ‍್ಯಾಂಕ್ ಬರಲೆಂದೇ ಸೂರ್ಯತೇಜನ ಅಂಕಪಟ್ಟಿಯಲ್ಲಿ ತಪ್ಪೆಸಗಲಾಗಿದೆ ಎನ್ನುವುದು ರ‍್ಯಾಂಕ್ ವಂಚಿತ ವಿದ್ಯಾರ್ಥಿ ತಂದೆಯ ಆರೋಪ.

 ಇನ್ನು ಸೂರ್ಯತೇಜ ತನಗೆ ಸಿಗಬೇಕಾದ ಹಾಗೂ ಚಿನ್ನದ ಪದಕಕ್ಕಾಗಿ ವಿವಿಯ ರಿಜಿಸ್ಟ್ರಾರ್​'ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿ ವಾಲಾ, ಪ್ರಧಾನಿ ಮೋದಿಗೂ ಸಹ ದೂರು ನೀಡಿದ್ದಾನೆ. ಅದೇನೇ ಇರಲಿ ವಿವಿ ಮಾಡಿದ ತಪ್ಪಿನಿಂದಾಗಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ರ‍್ಯಾಂಕ್ ಹಾಗೂ ಚಿನ್ನದ ಪದಕ ವಂಚಿತನಾಗಿದ್ದಾನೆ.