ಬೆಂಗಳೂರು :  ಅಕ್ರಮ ಮರಳು ಗಣಿಗಾರಿಕೆ ಮಾಫಿಯಾ ರಾಜ್ಯದಲ್ಲಿ ಮತ್ತೊಬ್ಬ ಸರ್ಕಾರಿ ಅಧಿಕಾರಿಯನ್ನು ಬಲಿ ತೆಗೆದುಕೊಂಡಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿನ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಇನ್ನು ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌, ರಾಜ್ಯದಲ್ಲಿ ಅಕ್ರಮ ಮರಳು ದಂಧೆ ಹೆಚ್ಚಾಗಿದೆ. ಅಕ್ರಮ ಮರಳು ದಂಧೆ ನಿಯಂತ್ರಣ ಕುರಿತ ಸಂಪುಟ ಉಪ ಸಮಿತಿಯ ಅಧ್ಯಕ್ಷ ನಾನೇ ಆಗಿದ್ದು, ಕಾನೂನು ಕ್ರಮಗಳನ್ನು ಬಿಗಿಗೊಳಿಸುತ್ತೇವೆ. ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ತಪಾಸಣೆ ಮಾಡಲು ಮುಂದಾದ ಗ್ರಾಮಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿದ ಪ್ರಕರಣ ಹೇಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ಸ್ಥಳಕ್ಕೆ ಸಂಬಂಧಪಟ್ಟಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂಥ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದರು.

ಮರಳು ಗಣಿ ನಿಯಂತ್ರಣ - ಪರಂ:  ಇದೇ ವೇಳೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್‌, ಮರಳು ಮಾಫಿಯಾ ಹತ್ತಿಕ್ಕಲು ಹೋದಾಗ ಈ ರೀತಿಯ ಘಟನೆ ಆಗಬಾರದಿತ್ತು. ಅಕ್ರಮ ಮರಳು ಗಣಿಗಾರಿಕೆಗೆ ನಿಯಂತ್ರಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶೀಘ್ರ ಈ ಕುರಿತು ಸಭೆ ನಡೆಸಲಾಗುವುದು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ವಿಶೇಷ ತಂಡ ರಚಿಸಿ, ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಲಾರಿ ರಾಜಕೀಯ ಮುಖಂಡರೊಬ್ಬರಿಗೆ ಸೇರಿದೆ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌, ಲಾರಿಯ ಬಗ್ಗೆ ತನಿಖೆ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.