ಪಣಜಿ [ಅ.21]: ಹಸುಗಳು ಶುದ್ಧ ಸಸ್ಯಾಹಾರವನ್ನು ಬಿಟ್ಟು ಬೇರೇನನ್ನೂ ಸೇವಿಸುವುದಿಲ್ಲ. ಆದರೆ, ಗೋವಾದಲ್ಲಿ ಬೀಡಾಡಿ ಹಸುಗಳು ಮಾಂಸಾಹಾರಿಗಳಾಗಿ ಬದಲಾಗಿವೆ. ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳಲ್ಲಿ ಅಳಿದುಳಿದ ಚಿಕನ್‌ ತುಂಡುಗಳು ಮತ್ತು ಫಿಶ್‌ ಫ್ರೈ ತಿಂದು ಬೀದಿ ಹಸುಗಳು ಹೊಟ್ಟೆತುಂಬಿಸಿಕೊಳ್ಳುತ್ತಿವೆ. ಮೂಲತಃ ಸಸ್ಯಾಹಾರಿಯಾಗಿರುವ ಹಸುಗಳು ಏಕಾಏಕಿ ನಾನ್‌-ವೆಜ್‌ ಹಸುಗಳಾಗಿ ಬದಲಾಗಿರುವುದು ಗೋವಾ ಸರ್ಕಾರವನ್ನು ಚಿಂತೆಗೆ ದೂಡಿದೆ. ಹೀಗಾಗಿ ಅವುಗಳನ್ನು ಪುನಃ ಸಸ್ಯಾಹಾರಿಗಳನ್ನಾಗಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ದೆಹಲಿ ಮೂಲದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಕ್ಯಾಲಂಗೂಟ್‌ನಲ್ಲಿ ಮಾಂಸಾಹಾರ ರೂಢಿಸಿಕೊಂಡು ಹುಲ್ಲು ಅಥವಾ ಸಸ್ಯಾಹಾರವನ್ನು ತಿನ್ನಲು ಹಿಂದೇಟು ಹಾಕುತ್ತಿರುವ 76 ಬೀದಿ ಹಸುಗಳನ್ನು ಗೋಶಾಲೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಪಶುವೈದ್ಯರು ವೈದ್ಯಕೀಯ ಚಿಕಿತ್ಸೆ ನೀಡಲಿದ್ದಾರೆ. ಅವು ಪುನಃ ಸಸ್ಯಾಹಾರಿಗಳಾಗಲು 4 ರಿಂದ 5 ದಿನಗಳು ಬೇಕಾಗಲಿವೆ ಎಂದು ಗೋವಾ ತ್ಯಾಜ್ಯ ನಿರ್ವಹಣೆ ಸಚಿವ ಮೈಕೆಲ್‌ ಲೊಬೋ ಹೇಳಿದ್ದಾರೆ.

ಮಾಂಸಾಹಾರ ಸೇವನೆ ಏಕೆ?: ಬೀಡಾಡಿ ಹಸುಗಳು ಕಸದ ತೊಟ್ಟಿಬಳಿ ಬಿದ್ದಿರುವ ಎಲ್ಲ ವಸ್ತುಗಳನ್ನು ಮೂಸಿ ನೋಡುತ್ತವೆ. ಮೊದಲೆಲ್ಲಾ ಈ ಹಸುಗಳು ಮಾಂಸಾಹಾರಗಳನ್ನು ಮೂಸಿ ಮುಂದೆ ಹೋಗುತ್ತಿದ್ದವು. ಆದರೆ, ಕ್ಯಾಲಂಗೂಟ್‌ ಮತ್ತು ಕ್ಯಾಂಡೋಲಿಮ್‌ನಲ್ಲಿ ಬೀದಿ ಹಸುಗಳು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಳಿದುದಳಿದ ಮಾಂಸದ ತುಣುಕುಗಳನ್ನು ಸೇವಿಸುವುದನ್ನು ರೂಢಿಸಿಕೊಂಡಿವೆ. ಇದರಿಂದ ಅವುಗಳ ದೇಹ ವ್ಯವಸ್ಥೆ ಮಾನವನ ರೀತಿಯಂತೆ ಆಗಿದೆ ಎಂದು ಸಚಿವರು ವಿವರಿಸಿದ್ದಾರೆ.