ರಾಜ್ಯದಲ್ಲಿ ಮತ್ತೊಬ್ಬ ವಿಚಾರವಾದಿಯ ಹತ್ಯೆಗೆ ಯತ್ನ ನಡೆದಿದೆ. ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರನ್ನು ಹತ್ಯೆ ಮಾಡುವ ಸಂಚು ಕೂದಲೆಳೆಯಿಂದ ವಿಫಲವಾಗಿದೆ.

ಮಂಗಳೂರು(ಮಾ. 16): ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರನ್ನು ಹತ್ಯೆ ಮಾಡುವ ಸಂಚು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ತಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದರೆಂದು ನರೇಂದ್ರ ನಾಯಕ್ ಅವರೇ ಆರೋಪಿಸಿದ್ದಾರೆ.

ನಿನ್ನೆ, ಬುಧವಾರ ಮುಂಜಾನೆ 6.30 ಸುಮಾರಿಗೆ ನರೇಂದ್ರ ನಾಯಕ್ ಎಂದಿನಂತೆ ತಮ್ಮ ಮನೆ ಬಳಿ ಇರುವ ಸ್ವಿಮ್ಮಿಂಗ್ ಪೂಲ್'ಗೆ ಈಜಲು ತೆರಳಿದಾಗ ಈ ಘಟನೆ ನಡೆದಿದೆ. ಬುಲೆಟ್'​ನಲ್ಲಿ ಬಂದ ಇಬ್ಬರು ಆಗಂತುಕರು ಕಾರಿನ ಟೈರ್​ ಪಂಚರ್ ಆಗಿದೆ ಎಂದು ನಾಯಕ್'ರನ್ನು ಯಾಮಾರಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಅವರು ಕಾರು ಚಲಾಯಿಸಿ ಮುಂದೆ ಹೋಗಿದ್ದಾರೆ. ದುಷ್ಕರ್ಮಿಗಳು ತಮ್ಮನ್ನು ಹತ್ಯೆಗೈಯಲು ಅಥವಾ ತಮ್ಮ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದಿರಬಹುದು ಎಂದು ಪ್ರೊ| ನಾಯಕ್ ಶಂಕಿಸಿದ್ದಾರೆ.

ಈ ಬಗ್ಗೆ ಪ್ರೊ. ನರೇಂದ್ರ ನಾಯಕ್ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಚಂದ್ರಶೇಖರ್, ನರೇಂದ್ರ ನಾಯಕ್ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಮಾರ್ಚ್​ 21ರಂದು ವಿನಯ್ ಬಾಳಿಗ ಹತ್ಯೆಗೆ ಒಂದು ವರ್ಷವಾಗುತ್ತದೆ. ಈ ಸಂದರ್ಭದಲ್ಲಿ ನಗರದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ನಡುವೆ, ಬಾಳಿಗ ಪರ ಹೋರಾಟಗಾರರನ್ನು ಮುಗಿಸುವ ಸಂಚು ಇದಾಗಿರಬಹುದು ಎಂದು ಶಂಕಿಸಲಾಗಿದೆ. ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಕೈವಾಡ ಈ ಘಟನೆಯಲ್ಲೂ ಇರುವ ಸಾಧ್ಯತೆ ಇದೆ.

ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಪ್ರೊ| ನರೇಂದ್ರ ನಾಯಕ್ ಅವರು ಸುಪಾರಿ ಕಿಲ್ಲರ್ ಶಿವ ಮತ್ತವರ ಸಹಚರರು ಈ ಕೃತ್ಯ ಎಸಗಿದ್ದಾರೆಂದು ಶಂಕಿಸಿದ್ದಾರೆ. ಅಲ್ಲದೇ, ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್'ನ ನರೇಶ್ ಶೆಣೈ ವಿರುದ್ಧವೂ ನರೇಂದ್ರ ನಾಯಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ, ಪ್ರೊ| ನರೇಂದ್ರ ನಾಯಕ್ ಅವರ ಬೆಂಗಾವಲಿಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.

ಇದೇ ವೇಳೆ, ನಮೋ ಬ್ರಿಗೇಡ್'ನ ನರೇಶ್ ಶೆಣೈ ತನಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲವೆಂದು ಸುವರ್ಣನ್ಯೂಸ್'ಗೆ ಹೇಳಿಕೆ ನೀಡಿದ್ದಾರೆ. ತಮ್ಮ ಹಾಗು ನರೇಂದ್ರ ನಾಯಕ್ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯವಿದೆಯೇ ಹೊರತು ವೈಯಕ್ತಿಕ ಹಗೆತನವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ವರದಿ: ಸುಖೇಶ್ ಕುಮಾರ್, ಮಂಗಳೂರು, ಸುವರ್ಣನ್ಯೂಸ್