ಉಸ್ಮಾನ್‌ಪುರ್(ಮಾ.27): ಕಿವಿಯ ಪರದೆಗೆ ಕಿರಿಕಿರಿ ಉಂಟು ಮಾಡುವ ಜನರೇಟರ್ ಶಬ್ಧ, ಮನಸ್ಸಿನ ಪರದೆಯಲ್ಲಿ ಉಜ್ವಲ ಭವಿಷ್ಯದ ಕನಸಿನ ಮೆರವಣಿಗೆ. ಕಿವಿಗೆ ಹತ್ತಿ ಇಟ್ಟುಕೊಂಡು ಓದಿ ಐಎಎಸ್ ಪಾಸಾಗುವ ಮೂಲಕ ಕನಸನ್ನು ನನಸನ್ನಾಗಿಸಿಕೊಂಡ ಗೋವಿಂದ್ ಜೈಸ್ವಾಲ್ ಎಂಬ ಹಠವಾದಿಯ ಕತೆ ಇದು.

ಉತ್ತರ ಪ್ರದೇಶದ ಸಣ್ಣ ಹಳ್ಳಿಯೊಂದರ ತರುಣನೋರ್ವ UPSC ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಪಡೆದು ಐಎಎಸ್ ಆಗುವ ತನ್ನ ಕನಸನ್ನು ನನಸನ್ನಾಗಿಸಿಕೊಂಡ. ಅದೂ ಕೇವಲ 21 ನೇ ವಯಸ್ಸಿಗೆ ಐಎಎಸ್ ಹುದ್ದೆ ಅಲಂಕರಿಸಿದ ಅಂದರೆ ಆತನ ಹಠದ ಕುರಿತು ಬರೆಯಲು ಪದಗಳೆಲ್ಲಿವೆ ಹೇಳಿ.

ಕಡುಬಡತನದ ಹಿನ್ನೆಲೆಯುಳ್ಳ ಗೋವಿಂದ್ ಜೈಸ್ವಾಲ್ ತಂದೆ ಆಟೋರೀಕ್ಷಾ ಓಡಿಸುತ್ತಾರೆ. ಇರುವ ಪುಟ್ಟ ಮನೆಯಲ್ಲೇ ಗೋವಿಂದ್ ಓದು ಪ್ರಾರಂಭಿಸಿದರು. ತಂದೆ-ತಾಯಿಯ ಕಷ್ಟ ಅರಿತಿದ್ದ ಗೋವಿಂದ್, ಓದು ಮಾತ್ರ ತಮ್ಮನ್ನು ಬಡತನದಿಂದ ಪಾರು ಮಾಡಬಹುದು ಎಂಬುದನ್ನು ಅರಿತಿದ್ದರು.

ಇನ್ನು ಗೋವಿಂದ್ ಜೈಸ್ವಾಲ್ ಅವರಿಗೆ ಮೂರು ಜನ ಅಕ್ಕಂದಿರಿದ್ದು, ಎಲ್ಲರ ಆರೈಕೆಯಲ್ಲಿ ಮನೆಯ ಅತ್ಯಂತ ಪ್ರೀತಿಪಾತ್ರ ಮಗನಾಗಿ ಬೆಳೆದ ಹುಡುಗ. ಜೀವನದ ಕಷ್ಟಗಳನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಅರಿತಿದ್ದ ಗೋವಿಂದ್, ಎಲ್ಲವನ್ನೂ ಎದುರಿಸುವ ವಾಗ್ದಾನ ಮಾಡಿದ್ದರು.

ಅದರಂತೆ ಪದವಿ ಬಳಿಕ ಊರು ಬಿಟ್ಟು ದೆಹಲಿ ಸೇರಿಕೊಂಡ ಜೈಸ್ವಾಲ್, ಐಎಎಸ್‌ ಕೋಚಿಂಗ್ ಪಡೆದು 2006ರಲ್ಲಿ UPSC ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಗೋವಿಂದ್ 48ನೇ ಸ್ಥಾನ ಪಡೆದು ಐಎಎಸ್ ಶ್ರೇಣಿ ಗಳಿಸಿದ್ದರು.

ಒಟ್ಟಿನಲ್ಲಿ ಬಡತನವನ್ನೂ ಮೀರಿ ಉಜ್ವಲ ಭವಿಷ್ಯದ ಕನಸನ್ನು ನನಸಾಗಿಸಿಕೊಂಡ ಗೋವಿಂದ್ ಜೈಸ್ವಾಲ್, ಪರಿಶ್ರಮ ಮತ್ತು ಏಕಾಗ್ರತೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ಇತರ ಹಠವಾದಿಗಳಿಗೆ ಕಳುಹಿಸಿದ್ದಾರೆ.