Asianet Suvarna News Asianet Suvarna News

ರಾಜ್ಯದಲ್ಲಿ ಮಹದಾಯಿ ಕಾಮಗಾರಿ ನಿಲ್ಲಿಸಲು ಗೋವಾ ಸಿಎಂ ಆಗ್ರಹ

ನಿರ್ಬಂಧವಿದ್ದರೂ ಕರ್ನಾಟಕವು ಮಹದಾಯಿ ಕಾಮಗಾರಿ ನಡೆಸುತ್ತಿದ್ದು ಇದನ್ನು ಸ್ಥಗಿತಗೊಳಿಸುವಂತೆ ಗೋವಾ ಸಿಎಂ ಪರಿಕರ್ ಆಗ್ರಹಿಸಿದ್ದಾರೆ.

Stop Mahadayi Work Says Goa CM

ಪಣಜಿ: ನಿರ್ಬಂಧವಿದ್ದರೂ ಕರ್ನಾಟಕವು ಮಹದಾಯಿ ಕಾಮಗಾರಿ ನಡೆಸುತ್ತಿದ್ದು ಇದನ್ನು ಸ್ಥಗಿತಗೊಳಿಸುವಂತೆ ಗೋವಾ ಸಿಎಂ ಪರಿಕರ್ ಆಗ್ರಹಿಸಿದ್ದಾರೆ. ಕಾಮಗಾರಿ ಬಗ್ಗೆ ಗೋವಾದ ತಂಡವೊಂದು ಕುಣಕುಂಬಿಗೆ ಭೇಟಿ ನೀಡಿ ವರದಿ ನೀಡಿತ್ತು. ಮಹದಾಯಿ ನೀರು ಬಿಡುಗಡೆಯ ಬಗ್ಗೆ ಕ್ಯಾತೆ ತೆಗೆದಿದ್ದ ಗೋವಾ ಸರ್ಕಾರ ಈಗ ಮತ್ತೊಂದು ತಗಾದೆ ಶುರುಮಾಡಿಕೊಂಡಿದೆ. ಕರ್ನಾಟಕವು ಮಹದಾಯಿ (ಕಳಸಾ- ಬಂಡೂರಿ) ನಾಲೆ ಕಾಮಗಾರಿಯನ್ನು ಪುನರಾ ರಂಭಿಸಿದೆ ಎಂದು ಆರೋಪಿಸಿರುವ ಗೋವಾ, ಕೂಡಲೇಕಾಮಗಾರಿ ನಿಲ್ಲಿಸುವಂತೆ ಕರ್ನಾಟಕವನ್ನು ಆಗ್ರಹಿಸಿದೆ.

‘ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜತೆ ಮಾತು ಕತೆ ನಡೆಸುವಂತೆ ನಮ್ಮ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದೇನೆ. ಕರ್ನಾಟಕ ಸರ್ಕಾರ ಕೂಡಲೇ ಕಳಸಾ-ಬಂಡೂರಿ ಕಾಮಗಾರಿ ನಿಲ್ಲಿಸಬೇಕು’ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಈ ನಡುವೆ, ಕರ್ನಾಟಕವು ಮಹದಾಯಿ ಯೋಜನೆಗೆ ಮರುಚಾಲನೆ ನೀಡಿದೆ ಎಂದು ಗೋವಾದ ಕೆಲವು ಮಾಧ್ಯಮ ವರದಿಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿರುವ ಸ್ಥಳವಾದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಗೆ ಗೋವಾ ಅಧಿಕಾರಿಗಳ ತಂಡವೊಂದು ಶುಕ್ರವಾರ ಭೇಟಿ ನೀಡಿತು.

ಗೋವಾ ನೀರಾವರಿ ಸಚಿವ ವಿನೋದ್ ಪಾಳ್ಯೇಕರ್ ಅವರ ಸೂಚನೆ ಮೇರೆಗೆ ಗೋವಾ ತಂಡ ಭೇಟಿ ನೀಡಿತು. ಈ ಬಗ್ಗೆ ಶುಕ್ರವಾರ ಸುದ್ದಿಸಂಸ್ಥೆಗೆ ಹಾಗೂ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ ಪಾಳ್ಯೇಕರ್, ‘ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ನಾನು ಕಣಕುಂಬಿಗೆ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ತಂಡ ಕಳಿಸಿದ್ದೇನೆ’ ಎಂದು ಖಚಿತಪಡಿಸಿದರು.

ಕಣಕುಂಬಿಗೆ ಭೇಟಿ ನೀಡಿದ ಮುಖ್ಯ ಎಂಜಿನಿಯರ್ ಸಂದೀಪ ನಾಡಕರ್ಣಿ ಅವರ ತಂಡ ಸಂಜೆ ಪಣಜಿಗೆ ಆಗಮಿಸಿ ಪಾಳ್ಯೇಕರ್ ಅವರಿಗೆ ವರದಿ ಸಲ್ಲಿಸಿತು. ವರದಿ ಜತೆ ಫೋಟೋಗಳನ್ನು ಲಗತ್ತಿಸಿದ್ದು, ಕರ್ನಾಟಕದ ಕೆಲಸಗಾರರು ಕಣಕುಂಬಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ‘ಕನ್ನಡಪ್ರಭ’ವು ಸಚಿವ ಪಾಳ್ಯೇಕರ್ ಅವರನ್ನು ಸಂಪರ್ಕಿಸಿದಾಗ, ‘ಇವು ಶುಕ್ರವಾರವೇ ತೆಗೆದ ಛಾಯಾಚಿತ್ರಗಳು’ ಎಂದು ಖಚಿತಪಡಿಸಿದ್ದಾರೆ. ಈ ನಡುವೆ, ಟ್ವೀಟ್ ಕೂಡ ಮಾಡಿರುವ ಪಾಳ್ಯೇಕರ್ ‘ಮಹದಾಯಿ ರಕ್ಷಣೆಗೆ ನಾವು ಬದ್ಧ. ಕಣಕುಂಬಿಯಲ್ಲಿ ಕಾಮಗಾರಿ ನಿಲ್ಲಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು ಎಂದು ಉತ್ತರ ಗೋವಾ ಜಿಲ್ಲಾಧಿಕಾರಿ ನೀಲಾ ಮೋಹನ್ ಅವರಿಗೆ ಸೂಚಿಸಿದ್ದೇನೆ. ಇದೇ ವೇಳೆ ಕರ್ನಾಟಕ ಮುಖ್ಯ ಕಾರ್ಯದರ್ಶಿ ಜತೆ ಶುಕ್ರವಾರ ಸಂಜೆಯೇ ಮಾತನಾಡುವಂತೆ ಗೋವಾ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ. ನಾನೂ ರಾತ್ರಿಯೇ ಕಣಕುಂಬಿಗೆ ಹೋಗುವೆ’ ಎಂದಿದ್ದಾರೆ. ಸಂಜೆ ಪಾಳ್ಯೇಕರ್ ಜತೆಗಿನ ಸಭೆಯಲ್ಲಿ ನೀಲಾ ಮೋಹನ್, ನಾಡಕರ್ಣಿ ಹಾಗೂ ಅಡ್ವೋಕೇಟ್ ಜನರಲ್ ದತ್ತಪ್ರಸಾದ ಲಾವಂಡೆ ಕೂಡ ಹಾಜರಿದ್ದರು. ಮಹದಾಯಿ ನ್ಯಾಯಾಧಿಕರಣವು ಕಾಮಗಾರಿಗೆ ಈಗಾಗಲೇ ತಡೆ ನೀಡಿದ್ದು, ಕರ್ನಾಟಕ ಸರ್ಕಾರವು ಕಾಮಗಾರಿ ನಿಲ್ಲಿಸಿದ್ದಾಗಿ ಈ ಹಿಂದೆಯೇ ಹೇಳಿತ್ತು.

Follow Us:
Download App:
  • android
  • ios