Asianet Suvarna News Asianet Suvarna News

ರೇಷನ್ ಕಾರ್ಡ್ ಕೆವೈಸಿ ತಾತ್ಕಾಲಿಕ ಸ್ಥಗಿತ : ಎಲ್ಲಿವರೆಗೆ?

ರೇಷನ್ ಕಾರ್ಡ್ ದಾರರ ಕೆವೈಸಿ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ತಾಂತ್ರಿಕ ದೋಷದ ಕಾರಣದಿಂದ ನಿಲ್ಲಿಸಲಾಗಿದೆ. 

Stop collecting Ration card holders E KYC till July 15
Author
Bengaluru, First Published Jun 21, 2019, 8:13 AM IST

ಬೆಂಗಳೂರು [ಜೂ. 21] :  ಪಡಿತರ ಚೀಟಿದಾರ ಕುಟುಂಬದ ಸದಸ್ಯರ ಆಧಾರ್‌ ದೃಢೀಕರಣ (ಇ-ಕೆವೈಸಿ) ಮಾಡಿಕೊಳ್ಳುವುದನ್ನು ಜುಲೈ 15ರವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಪಡಿತರ ಚೀಟಿದಾರ ಕುಟುಂಬ ಸದಸ್ಯರ ಆಧಾರ್‌ ದೃಢೀಕರಣವನ್ನು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆನ್‌ಲೈನ್‌ ಮೂಲಕ ಮಾಡಿಕೊಳ್ಳುವಂತೆ ಈ ಹಿಂದೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿತ್ತು. ಜುಲೈ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದ ಸದಸ್ಯರಿಗೆ ಪಡಿತರ ವಿತರಣೆ ನಿಲ್ಲಿಸುವುದಾಗಿ ಆದೇಶಿಸಿತ್ತು. ಇದೀಗ ಇ-ಕೆವೈಸಿ ನೋಂದಣಿಯನ್ನು ಜುಲೈ 15ರವರೆಗೆ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ ಇಲಾಖೆ ತಿಳಿಸಿದೆ.

ತಾಂತ್ರಿಕ ದೋಷ ಕಾರಣ:  ಇ-ಕೆವೈಸಿ ಮತ್ತು ಪಡಿತರ ವಿತರಣೆಯನ್ನು ಒಂದೇ ಸಮಯದಲ್ಲಿ ಮಾಡುತ್ತಿದ್ದ ಕಾರಣ ತಾಂತ್ರಿಕ ದೋಷ (ಸರ್ವರ್‌ಡೌನ್‌) ಕಂಡು ಬಂದಿತ್ತು. ಇದರಿಂದ ಪಡಿತರ ಚೀಟಿದಾರರು ಪಡಿತರಕ್ಕಾಗಿ ಮೂರ್ನಾಲ್ಕು ಬಾರಿ ನ್ಯಾಯಬೆಲೆ ಅಂಗಡಿಗೆ ಅಲೆದಾಡುವಂತಹ ಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಇ-ಕೆವೈಸಿ ಅಥವಾ ಪಡಿತರ ವಿತರಣೆ ನಿಲ್ಲಿಸಿ ತಾಂತ್ರಿಕ ದೋಷದ ಸಮಸ್ಯೆ ಸರಿಪಡಿಸುವಂತೆ ರಾಜ್ಯ ಪಡಿತರ ವಿತರಕರ ಸಂಘದ ಸದಸ್ಯರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಸಭೆ ನಡೆಸಿದ್ದ ಆಯುಕ್ತರು ಇ-ಕೆವೈಸಿ ನೋಂದಣಿ ಮತ್ತು ಪಡಿತರ ವಿತರಣೆ ಅವಧಿಯಲ್ಲಿ ಬದಲಾವಣೆ ಮಾಡಿ ಆದೇಶಿಸಿದ್ದಾರೆ.

ಪ್ರತಿದಿನ ಬೆಳಗ್ಗೆ 7ರಿಂದ 12ರವರೆಗೆ ಪಡಿತರ ವಿತರಣೆ ಮತ್ತು 12ರಿಂದ 4 ಗಂಟೆವರೆಗೆ ಆನ್‌ಲೈನ್‌ ಅರ್ಜಿ, ಹೊಸ ಪಡಿತರ ಕಾರ್ಡ್‌ ವಿತರಣೆ ಇತ್ಯಾದಿ ಕಾರ್ಯಗಳು ಹಾಗೂ 4ರಿಂದ ರಾತ್ರಿ 8ರವರೆಗೆ ಪಡಿತರ ವಿತರಿಸುವಂತೆ ಸೂಚನೆ ನೀಡಿದ್ದರು. ಆದರೆ ನಿಗದಿತ ಅವಧಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜುಲೈ 15ರವರೆಗೆ ತಾತ್ಕಾಲಿಕವಾಗಿ ಇ-ಕೆವೈಸಿ ನೋಂದಣಿ ನಿಲ್ಲಿಸಲು ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ. ಈ ಅವಧಿಯಲ್ಲಿ ತಾಂತ್ರಿಕ ದೋಷ ಕಂಡು ಬರದಂತೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ರಾಷ್ಟ್ರೀಯ ಪಡಿತರ ವಿತರಕರ ಒಕ್ಕೂಟದ ಕಾರ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅವರು ಕನ್ನಡ ಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios