ವಿಶೇಷವೆಂದರೆ, ಪುದುಚೇರಿ ಅಸೆಂಬ್ಲಿ ಸ್ಪೀಕರ್‌ ವಿ ವೈತಿಲಿಂಗಂ ಅವರು, ಪೊಂಗಲ್‌ ದಿನ ಸುಗಮವಾಗಿ ಜಲ್ಲಿಕಟ್ಟು ನಡೆಸುವಂತೆ ಕರೆ ನೀಡಿದ್ದಾರೆ. ‘‘ಯಾವುದೇ ಅಡ್ಡಿ ಆತಂಕಗಳಿಲ್ಲದೇ ಜಲ್ಲಿಕಟ್ಟು ನಡೆಯುವಂತೆ ನಾವು ನೋಡಿಕೊಳ್ಳಬೇಕು. ಈ ಕ್ರೀಡೆಯು ಧೈರ್ಯದ ಸಂಕೇತ. ಜತೆಗೆ, ತಮಿಳರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥದ್ದು,'' ಎಂದಿ​ದ್ದಾರೆ. ಇನ್ನೊಂದೆಡೆ, ಮದುರೈ ಶಾಸಕರೊಬ್ಬರು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಶುಕ್ರವಾರ ಜಲ್ಲಿಕಟ್ಟು ಆಯೋಜಿಸಿದ್ದಾರೆ. 

ನವದೆಹಲಿ/ಚೆನ್ನೈ(ಜ.14): ಜಲ್ಲಿಕಟ್ಟು ಕುರಿತು ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಕೆಲವರು ಸುಪ್ರೀಂ ಆದೇಶ ಉಲ್ಲಂಘಿಸಿ ಜಲ್ಲಿಕಟ್ಟು ನಡೆಸಿದರೆ, ಇನ್ನು ಕೆಲವರು ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಮತ್ತೊಂದೆಡೆ, ಯಾವುದೇ ಕಾರಣಕ್ಕೂ ನಿಷೇಧ ವಾಪಸ್‌ ಪಡೆಯಬಾರದು ಎಂದು ಕೋರಿ ಪ್ರಾಣಿ ಹಕ್ಕುಗಳ ಸಂಘಟನೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಪತ್ರ ಬರೆದಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಆರೆಸ್ಸೆಸ್‌ ಜಲ್ಲಿಕಟ್ಟು ಪರ ಧ್ವನಿಯೆತ್ತಿದೆ. ‘‘ಜಲ್ಲಿಕಟ್ಟು ಎನ್ನುವುದು ಕ್ರೌರ್ಯವಲ್ಲ, ಅದು ಗೂಳಿಯೊಂದಿಗೆ ಆಡುವ ಆಟ ಅಷ್ಟೆ,'' ಎಂದು ಆರೆಸ್ಸೆಸ್‌ನ ಅಖಿಲ ಭಾರತ ಸಹ-ಪ್ರಚಾರ್‌ ಪ್ರಮುಖ್‌ ಜೆ ನಂದಕುಮಾರ್‌ ಹೇಳಿದ್ದಾರೆ. ‘‘ಇದು ತಮಿಳು​ನಾಡಿನ ಕೃಷಿ ಸಂಪ್ರದಾಯದ ಭಾಗವಾಗಿದೆ. ಇಲ್ಲಿ ಗೂಳಿಯನ್ನಾಗಲೀ, ಒಂಟೆಯನ್ನಾಗಲೀ ಕೊಂದು ಸಂಭ್ರಮಿಸುವುದಿಲ್ಲ. ಅದರೊಂದಿಗೆ ಆಟ​ವಾಡಲಾಗುತ್ತದೆ. ಹಾಗಾಗಿ, ಇದು ಕ್ರೌರ್ಯ​ವಾಗುವುದಿಲ್ಲ,'' ಎಂದಿದ್ದಾರೆ.ಇದೇ ವೇಳೆ, ಜಲ್ಲಿಕಟ್ಟು ಕುರಿತು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜಲ್ಲಿಕಟ್ಟುಗೆ ಸ್ಪೀಕರ್‌ ಕರೆ

ವಿಶೇಷವೆಂದರೆ, ಪುದುಚೇರಿ ಅಸೆಂಬ್ಲಿ ಸ್ಪೀಕರ್‌ ವಿ ವೈತಿಲಿಂಗಂ ಅವರು, ಪೊಂಗಲ್‌ ದಿನ ಸುಗಮವಾಗಿ ಜಲ್ಲಿಕಟ್ಟು ನಡೆಸುವಂತೆ ಕರೆ ನೀಡಿದ್ದಾರೆ. ‘‘ಯಾವುದೇ ಅಡ್ಡಿ ಆತಂಕಗಳಿಲ್ಲದೇ ಜಲ್ಲಿಕಟ್ಟು ನಡೆಯುವಂತೆ ನಾವು ನೋಡಿಕೊಳ್ಳಬೇಕು. ಈ ಕ್ರೀಡೆಯು ಧೈರ್ಯದ ಸಂಕೇತ. ಜತೆಗೆ, ತಮಿಳರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥದ್ದು,'' ಎಂದಿ​ದ್ದಾರೆ. ಇನ್ನೊಂದೆಡೆ, ಮದುರೈ ಶಾಸಕರೊಬ್ಬರು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಶುಕ್ರವಾರ ಜಲ್ಲಿಕಟ್ಟು ಆಯೋಜಿಸಿದ್ದಾರೆ. 
ಭಾರಿ ಪ್ರತಿಭಟನೆ

ಎಂ ಕೆ ಸ್ಟಾಲಿನ್‌ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ತಮಿಳುನಾಡಿನಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಕಾರ್ಯಾಲಯದ ಮುಂದೆ ನಡೆದ ಪ್ರತಿಭಟನೆ​ಯಲ್ಲಿ ಕನಿಮೋಳಿ ಅವರೂ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸ್ಟಾಲಿನ್‌, ‘‘ಮೋದಿಯವರಿಗೆ ದೊಡ್ಡ ದೊಡ್ಡ ನಟರು, ಇತರರನ್ನು ಭೇಟಿಯಾಗಲು ಪುರು​ಸೊತ್ತಿದೆ. ಆದರೆ, ಪೊಂಗಲ್‌ ವೇಳೆ ಜಲ್ಲಿಕಟ್ಟು ನಡೆಸುವ ಕುರಿತು ಎಐಎಡಿಎಂಕೆ ಸಂಸದರು ಮಾತ​ನಾಡಲು ಹೋದರೆ, ಅವರನ್ನು ಭೇಟಿಯಾ​ಗಲು ಅವರಿಗೆ ಸಮಯವಿಲ್ಲ,'' ಎಂದು ಕಿಡಿಕಾರಿದ್ದಾರೆ. ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು. ಇಲ್ಲದಿದ್ದರೆ, ತಮಿಳರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದೂ ಹೇಳಿದ್ದಾರೆ.
ರಾಷ್ಟ್ರಪತಿಗೆ ಪತ್ರ

ಜಲ್ಲಿಕಟ್ಟು ಬೆಂಬಲಿಗರಿಂದ ಭಾರಿ ಟೀಕೆಗೆ ಗುರಿಯಾಗಿರುವ ಪ್ರಾಣಿ ಹಕ್ಕುಗಳ ಸಂಘಟನೆ ಪೇಟಾ ಇದೀಗ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಪ್ರಧಾನಿ ಮೋದಿ ಮತ್ತು ಪರಿಸರ ಸಚಿವ ಅನಿಲ್‌ ಮಾಧವ್‌ ದಾವೆ ಅವರಿಗೆ ಪತ್ರ ಬರೆದು, ಯಾವುದೇ ಕಾರಣಕ್ಕೂ ಜಲ್ಲಿಕಟ್ಟು ಸುಗ್ರೀವಾಜ್ಞೆ ಹೊರಡಿಸದಂತೆ ಮನವಿ ಮಾಡಿದೆ. ಈ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ಅಸಾಂವಿಧಾನಿಕ ಮತ್ತು ಅಧಿಕಾರದ ದುರ್ಬಳಕೆ ಆಗುತ್ತದೆ ಎಂದೂ ಪತ್ರದಲ್ಲಿ ಪೇಟಾ ತಿಳಿಸಿದೆ. ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ ಕೋಳಿಅಂಕ ನಿಷೇಧ ವಿಚಾರದಲ್ಲಿ ಹೊಸ ಆದೇಶ ಹೊರಡಿ​ಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ​ಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.