ಹೊಸದಾಗಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಆಕರ್ಷಿಸುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಆರ್‌ಬಿಐ ಕೆಲವೇ ಮಾನದಂಡ ಆಧರಿಸಿ ಅಧ್ಯಯನ ನಡೆಸಿರುವ ಪರಿಣಾಮ ಕರ್ನಾಟಕಕ್ಕೆ 5ನೇ ಸ್ಥಾನ ನೀಡಿದೆ. ಇದು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರು: ಹೊಸದಾಗಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಆಕರ್ಷಿಸುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಆರ್‌ಬಿಐ ಕೆಲವೇ ಮಾನದಂಡ ಆಧರಿಸಿ ಅಧ್ಯಯನ ನಡೆಸಿರುವ ಪರಿಣಾಮ ಕರ್ನಾಟಕಕ್ಕೆ 5ನೇ ಸ್ಥಾನ ನೀಡಿದೆ. ಇದು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯವು ಒಟ್ಟಾರೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳ ಆಕರ್ಷಣೆಯಲ್ಲಿ ಎರಡು ವರ್ಷದಿಂದಲೂ ಸತತವಾಗಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಆದರೆ ಆರ್‌ಬಿಐ ವರದಿ ಸಿದ್ಧಪಡಿಸುವಾಗ ಕೈಗಾರಿಕಾ ವಲಯದ ಪ್ರಗತಿಯ ಸಮಗ್ರ ಬೆಳವಣಿಗೆಯನ್ನು ಪರಿಗಣಿಸದೆ ಕೇವಲ ಕೆಲವೇ ಮಾನದಂಡ ಆಧರಿಸಿ ವರದಿ ನೀಡಿದೆ.

ಇದರಿಂದ ರಾಜ್ಯದ ಸಾಧನೆ ಬಗ್ಗೆ ಗೊಂದಲ ಉಂಟಾಗಿದೆ. ಆರ್‌ಬಿಐಯು ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಮೇಲಿನ ಅಂಶಗಳ ಆಧಾರದ ಮೇಲೆ ಕರ್ನಾಟಕ ರಾಜ್ಯವು 2015-16ರ ಸಾಲಿನಲ್ಲಿ ಶೇ. 6.2ರಷ್ಟು ಬಂಡವಾಳ ಹೂಡಿಕೆ ಆಕರ್ಷಿಸಿದ್ದು, 2016-17ರ ಸಾಲಿನಲ್ಲಿ ಇದು ಶೇಕಡ 6.6ರಷ್ಟು ಪ್ರಗತಿ ಕಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಕೇಂದ್ರ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಪಾಲಿಸಿ ಅಂಡ್ ಪ್ರಮೋಷನ್ಸ್ ಸಚಿವಾಲಯ ಪ್ರಕಟಿಸಿರುವ ವರದಿ ಪ್ರಕಾರ ಕೈಗಾರಿಕೆ ಉದ್ದೇಶದಿಂದ ಹೂಡಿಕೆಯಾದ ಬಂಡವಾಳದಲ್ಲಿ ರಾಜ್ಯ ಮೊದಲ ಸ್ಥಾನ ಪಡೆದಿದೆ. 2017ರಲ್ಲೂ ಇದೇ ಸ್ಥಾನ ಮುಂದುವರೆಸಿ ಕೊಂಡಿದ್ದು ವಿವರಗಳನ್ನು dipp.gov.in ವೆಬ್ಸೈಟ್‌ನಲ್ಲಿ ವೀಕ್ಷಿಸಬಹುದು ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2016-17ರ ಪ್ರಗತಿ ಬಗ್ಗೆ ಆರ್‌ಬಿಐಯು ವರದಿ ಸಿದ್ಧಪಡಿಸುವಾಗ ಕಾರ್ಪೊರೇಟ್ ಕ್ಷೇತ್ರಗಳ್ನು ಮಾತ್ರ ಪರಿಗಣಿಸಿದೆ. ಹೀಗಾಗಿ ಯೋಜನೆಗಳ ಬಂಡವಾಳ ಹೂಡಿಕೆಯು 10 ಕೋಟಿ ಮೇಲ್ಪಟ್ಟು ಇರುವ ಪ್ರಸ್ತಾವನೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಜತೆಗೆ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಯೋಜನೆಗಳ ಪ್ರಸ್ತಾವನೆಗಳನ್ನು ಮಾತ್ರ ವರದಿಯಲ್ಲಿ ಪ್ರಕಟಿಸಿದೆ. ಆದರೆ ಕರ್ನಾಟಕದಲ್ಲಿ ಸ್ವಂತ ಬಂಡವಾಳ ಹೂಡಿಕೆ ಮತ್ತು ಪಾಲುಗಾರಿಕೆ ಸಂಸ್ಥೆಗಳ ಮೂಲಕ ಬಂಡವಾಳ ಹೂಡಿಕೆ ಯೋಜನೆಗಳು ಸಾಕಷ್ಟು ಇವೆ. ಅವುಗಳನ್ನು ಆರ್‌ಬಿಐ ತನ್ನ ವರದಿಯಲ್ಲಿ ಪರಿಗಣಿಸಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.