ಮಾದಿಗರ ಹಕ್ಕಿನ ಹೋರಾಟ ಮುಗಿಸಲು ಯತ್ನಿಸಿದ್ದ ಸಚಿವರು, ಹೋರಾಟಗಾರರ ಜತೆ ಮೊಬೈಲ್'ನಲ್ಲಿ ಮಾತನಾಡಿ ಹೋರಾಟ ನಿಲ್ಲಿಸುವಂತೆ ಹುಕುಂ ಮಾಡಿರುವ ಟೆಲಿಫೋನ್ ಆಡಿಯೋ ಸಂಭಾಷಣೆ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.

ಬೆಂಗಳೂರು(ಜ.3): ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಸ್ವಂತ ಸಮುದಾಯದ ಹಿತವನ್ನೇ ಬಲಿಕೊಡಲು ಮುಂದಾಗಿದ್ದ ರಾಜ್ಯ ಸರ್ಕಾರದ ಸಚಿವರೊಬ್ಬರ ಕರಾಳ ಮುಖವನ್ನು ಸುವರ್ಣ ನ್ಯೂಸ್ ದಾಖಲೆ ಸಮೇತ ಬಯಲಿಗೆಳೆದಿದೆ.

ಮಾದಿಗ ಸಮುದಾಯದ ಹೋರಾಟವನ್ನು ಹತ್ತಿಕ್ಕಲು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್ ಯತ್ನಿಸಿದ್ದ ಸಂಚು ಇದೀಗ ಬಯಲಾಗಿದೆ. ನ್ಯಾ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿತ್ತು. ಈ ಹೋರಾಟವನ್ನು ಬೆಂಗಳೂರಿಗೆ ಬಾರದಂತೆ ಚಿತ್ರದುರ್ಗದಲ್ಲೇ ನಿಲ್ಲಿಸಲು ಶತ ಪ್ರಯತ್ನ ನಡೆಸಿದ್ದಾರೆ.

ನವೆಂಬರ್ 20ಕ್ಕೆ ಕೂಡಲಸಂಗಮದಿಂದ ಆರಂಭವಾಗಿದ್ದ ಹೋರಾಟಗಾರರ ಪಾದಯಾತ್ರೆ ಸಚಿವರ ಕುತಂತ್ರದ ನಡುವೆಯೂ ಡಿ.11ಕ್ಕೆ ಬೆಂಗಳೂರು ತಲುಪಿ ಹೋರಾಟ ಯಶಸ್ಸು ಪಡೆದಿತ್ತು. ಮಾದಿಗರ ಹಕ್ಕಿನ ಹೋರಾಟ ಮುಗಿಸಲು ಯತ್ನಿಸಿದ್ದ ಸಚಿವರು, ಹೋರಾಟಗಾರರ ಜತೆ ಮೊಬೈಲ್'ನಲ್ಲಿ ಮಾತನಾಡಿ ಹೋರಾಟ ನಿಲ್ಲಿಸುವಂತೆ ಹುಕುಂ ಮಾಡಿರುವ ಟೆಲಿಫೋನ್ ಆಡಿಯೋ ಸಂಭಾಷಣೆ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.