ಬೆಂಗಳೂರು(ನ.23): ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಲು ಸತಾಯಿಸುವ ಸರ್ಕಾರ, ಇದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು  ಬಳಕೆ ಮಾಡದೇ  ವಾಪಸ್ ಕಳುಹಿಸಿರುವುದು ಇದೀಗ ಬಯಲಾಗಿದೆ. ಅಲ್ಲದೇ  ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಬಳಸದೇ, ಯಾವುದೇ ಕಾರಣವೂ ನೀಡದೇ ವಾಪಸ್ ಕಳುಹಿಸಿರುವುದನ್ನು ಸಿಎಜಿ ಬಲವಾಗಿ ಟೀಕಿಸಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮೀಸಲಿಟ್ಟ 67.90 ಲಕ್ಷವನ್ನು ರಾಜ್ಯ ಸರ್ಕಾರ ಬಳಸದೇ ವಾಪಸ್ ಮಾಡಿರುವುದು ಬಹಿರಂಗವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಪರಿಹಾರ ನೀಡಲು 7 ಕೋಟಿ ಅಗತ್ಯವಿದೆ ಎಂದು  ಬಜೆಟ್‌'ನಲ್ಲಿ ಅನುಮೋದನೆ ಪಡೆಯಲಾಗಿತ್ತು. ಆದರೆ  ಕಾರಣ ನೀಡದೇ 67.90 ಲಕ್ಷ ಮರು ಸಂದಾಯ ಮಾಡಲಾಗಿದೆ ಎಂದು ಸಿಎಜಿ ವಿವರಿಸಿದೆ.

ಸಚಿವರ ವೇತನಕ್ಕೆ 3.26 ಕೋಟಿ ಹೆಚ್ಚಳ

 2014-15ರಲ್ಲಿ ಸಚಿವರು ವೇತನ ಮತ್ತು ಭತ್ಯೆಗಾಗಿ ಧನವಿನಿಯೋಗ ಮಸೂದೆಯಲ್ಲಿ  5.56 ಕೋಟಿ ಬಳಕೆಗೆ ಸರ್ಕಾರ ಅನುಮೋದನೆ ಪಡೆದಿತ್ತು. ವೇತನ ಹೆಚ್ಚಳ ಮಾಡಿಕೊಂಡಿದ್ದರಿಂದಾಗಿ, ಹೆಚ್ಚುವರಿಯಾಗಿ 3.36 ಕೋಟಿ ಭರಿಸಬೇಕಾಯಿತು. ಸಚಿವರ ಸಂಖ್ಯೆ ಹೆಚ್ಚಳವಾಗಿದ್ದರಿಂದಾಗಿ ಪ್ರವಾಸ ಭತ್ಯೆ ರೂಪದಲ್ಲಿ 1 ಕೋಟಿ ಹೆಚ್ಚುವರಿ ವೆಚ್ಚವಾಗಿದೆ. ಇದಕ್ಕೆ ಯಾವುದೇ ಕಾರಣ ನೀಡಿಲ್ಲ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.

ಸಿಎಜಿ ವರದಿಯಲ್ಲಿ ಏನಿದೆ?

-ವಿವಿಧಿ ಯೋಜನೆಗಳಿಡಿ 219.99 ಕೋಟಿ ಮೀಸಲು

-163.89 ಕೋಟಿ ವೆಚ್ಚ, 56.09 ಕೋಟಿ ಉಳಿತಾಯ

-ಪಂಚಾಯತ್ ಅಭಿವೃದ್ಧಿ ಯೋಜನೆಯಡಿ ನಯಾಪೈಸೆ ಖರ್ಚು ಮಾಡಿಲ್ಲ

-ವೃದಾಪ್ಯ ವೇದನ ಯೋಜನೆಯಡಿ  202.37 ಕೋಟಿ ಉಳಿತಾಯ

-ರೇಷ್ಮೆ ಮಾರುಕಟ್ಟೆ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಶೇ. 59ರಷ್ಟು ವಾಪಸ್

-ರಾಷ್ಟ್ರೀಯ ಮಿಷನ್ ಯೋಜನೆಯಡಿ  30.90 ಕೋಟಿ ಉಳಿತಾಯ

-ಪರಿಶಿಷ್ಟ ಜಾತಿ ಉಪಯೋಜನೆಯಡಿ 5,58 ಕೋಟಿ ಉಳಿತಾಯ

-ಗಿರಿಜನ ವಿಶೇಷ ಘಟಕ ಯೋಜನೆಯಡಿ 5.83 ಕೋಟಿ ಉಳಿತಾಯ

-ತೋಟಗಾರಿಕೆ ಮಂಡಳಿಗೆ ಕೇಂದ್ರ ನೀಡಿದ್ದ  7.27 ಕೋಟಿ ವಾಪಸ್

-ತೆಂಗು ಉತ್ಪಾದನಾ ಪಾರ್ಕ್ ಗೆ ನೀಡಿದ್ದ 75 ಲಕ್ಷ  ವಾಪಸ್

2015ರಲ್ಲಿ ರಾಜ್ಯ ಸರ್ಕಾರ 24,768 ಕೋಟಿ ಸಾಲ ಮಾಡಿದ್ದು, ಸರ್ಕಾರದ ಒಟ್ಟು ಸಾಲದ ಮೊತ್ತ 1,83,321 ಕೋಟಿಗೆ ಏರಿಕೆಯಾಗಿದೆ... 2015ರಲ್ಲಿ ಪಡೆದ ಸಾಲದ ಈ ಪೈಕಿ 7,698 ಕೋಟಿಗಳನ್ನು ನೀರಾವರಿ ನಿಗಮಗಳು ಸೇರಿದಂತೆ ವಿವಿಧ ನಿಗಮಗಳು ಪಡೆದ ಸಾಲಗಳಾಗಿವೆ. ಈ ಸಾಲಕ್ಕೆ ಸರ್ಕಾರ ಖಾತ್ರಿ ನೀಡಿದೆ. 16,187 ಕೋಟಿಗಳನ್ನು ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆದಿದ್ದು, ಸರ್ಕಾರದ ಸಾಲದಲ್ಲಿ ಶೇ 48ರಷ್ಟಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.