ಹಾಸನ (ನ.16): ಜಿಲ್ಲೆಯ ಅದರಲ್ಲೂ ಮಲೆನಾಡು ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿರುವ ಆನೆ ಕಾರಿಡಾರ್ ಯೋಜನೆ ಜಾರಿ ಸಂಬಂಧ ಅಗತ್ಯ ಹಣಕಾಸು ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೊನೆಗೂ ರಾಜ್ಯ ಸರ್ಕಾರ ನಿರ್ಧರಿಸಿದೆ.

ಬುಧವಾರ ವಿಧಾನಸೌಧದ 3ನೇ ಮಹಡಿಯ ಮೀಟಿಂಗ್ ಹಾಲ್ ನಲ್ಲಿ ನಡೆದ ಕಂದಾಯ, ಅರಣ್ಯ ಇಲಾಖೆ ಸಚಿವರು ಮತ್ತು ಉನ್ನತಾಧಿಕಾರಿಗಳು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸಮ್ಮುಖದಲ್ಲಿ ನಡೆದ ಜಂಟಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಸಕಲೇಶಪುರ ತಾಲೂಕಿನ ಹೆತ್ತೂರು ಮತ್ತು ಯಸಳೂರು ಹೋಬಳಿಯ ಅನೇಕ ಹಳ್ಳಿಗಳ ಜನರು ಸ್ವಯಂಪ್ರೇರಿತವಾಗಿ ಆನೆ ಕಾರಿಡಾರ್ ಗೆ ತಮ್ಮ ತಮ್ಮ ಭೂಮಿ ಬಿಟ್ಟುಕೊಡಲು ವರ್ಷದ ಹಿಂದೆಯೇ ಮುಂದೆ ಬಂದಿದ್ದರು. ಅಷ್ಟೂ ರೈತರಿಗೆ ಸೂಕ್ತ ಪರಿಹಾರ ನೀಡಿದರೆ ಈಗಲೇ ಭೂಮಿಯನ್ನು ಸರ್ಕಾರದ ಸುಪರ್ದಿಗೆ ನೀಡುತ್ತಾರೆ, ಆದರೂ ಸರ್ಕಾರದ ಕಡೆಯಿಂದ ಇದಕ್ಕೆ ಪೂರಕ ಸ್ಪಂದನೆ ಸಿಕ್ಕಿಲ್ಲ ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಆನೆ ಕಾರಿಡಾರ್ ಗೆ ಭೂಮಿ ನೀಡಲು ಮುಂದಾಗಿರುವ ಗ್ರಾಮಸ್ಥರ ಪರವಾಗಿ ಅತ್ತಿಹಳ್ಳಿ ದೇವರಾಜ್, ತಮ್ಮಣ್ಣ ಮತ್ತು ರವಿ ಮಾತನಾಡಿ, ಭೂ ಸ್ವಾಧೀನದ ಬಗ್ಗೆ ಅನೇಕ ಸಲ ಪ್ರಸ್ತಾವನೆ ಸಲ್ಲಿಕೆಯಾಗಿದ್ರೂ ಇನ್ನೂ ಕಾರ್ಯಗತವಾಗಿಲ್ಲ ಎಂಬ ಅಂಶವನ್ನು ಸಭೆಯ ಮುಂದಿಟ್ಟರು. ಕ್ಯಾಂಫೋ ಯೋಜನೆಯಡಿ ಪರಿಹಾರ ನೀಡಲು ಕೇಂದ್ರದಿಂದ ರಾಜ್ಯಕ್ಕೆ 780 ಕೋಟಿ ರೂವರೆಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದು, ರಾಜ್ಯ ಸರ್ಕಾರ ಆ ಹಣ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ನೂರಾರು ರೈತರು ಸ್ವಯಂ ಪ್ರೇರಿತವಾಗಿ ಪಟ್ಟಾ ಭೂಮಿ ಕೊಡಲು ಮುಂದೆ ಬಂದಿದ್ದಾರೆ. ಆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಂರೆ 10 ಸಾವಿರ ಎಕರೆ ಅರಣ್ಯೀಕರವಾಗಲಿದೆ. ಹೀಗೆ ಸ್ವಯಂಪ್ರೇರಿತವಾಗಿ ಭೂಮಿ ಕೊಡಲು ದೇಶದ ಯಾವುದೇ ಭಾಗದಲ್ಲೂ ರೈತರು ಮುಂದೆ ಬರುವುದು ವಿರಳ, ಹೀಗಿದ್ದರೂ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಖಾರವಾಗಿಯೇ ಸಭೆಯಲ್ಲಿದ್ದ ಸಚಿವರ ಗಮನ ಸೆಳೆದರು. ಆನೆ ಹಾವಳಿಗೆ ಹೆದರಿ ಎಷ್ಟೋ ಮಂದಿ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಅನೇಕರು ಊರು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳುವಂತೆ ಹಿಂದೆಯೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ, ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾದರೆ ಸಮಸ್ಯೆಗೆ ಪರಿಹಾರ ಹೇಗೆ? ಎಂದು ಪ್ರಶ್ನಿಸಿದರು.

ಯಾರೇ ಆಗಲೀ ರೈತರಿಗೆ ತಮ್ಮ ಮನೆಯಿಂದ ಪರಿಹಾರ ಕೊಡೋದಿಲ್ಲ. ಬದಲಾಗಿ ಸರಕಾರಿ ನಿಯಮದಂತೆ ನಿಗದಿಯಾದ ಹಣ ಕೊಟ್ಟರೆ ಸಾಕು. ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ಭೂ ಸ್ವಾಧೀನ ಪಡಿಸಿಕೊಂಡು ಯೋಜನೆ ಗೆ ಚಾಲನೆ ನೀಡುವ ಬದಲು ಬರೀ ಮಾತಿನಿಂದ ಯಾವುದೇ ಪರಿಹಾರ ಸಿಗೋದಿಲ್ಲ ಎಂದು ಖಡಕ್ ಆಗಿ ಹೇಳಿದರು.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ನೂರಾರು ಜನ ಆನೆ ದಾಳಿಯಿಂದ ಸತ್ತಿದ್ದಾರೆ. ಅಪಾರ ಹಾನಿಯಾಗಿದೆ. ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಮನವಿ ಮಾಡಿದರು. ಈ ಸಂಬಂಧ ಮೊದಲು ನೀವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡುವ ಕುರಿತು ನಾವು ಹೋರಾಟ ಮಾಡುತ್ತೇವೆ ಎಂದು ಮಂಜು ಹೇಳಿದರು.
ಇಷ್ಟೆಲ್ಲಾ ಆದ ಬಳಿಕ ಕೊನೆಗೂ ಆನೆ ಕಾರಿಡಾರ್ ಯೋಜನೆ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು. ಅದಕ್ಕೆ ಅರಣ್ಯ ಸಚಿವ ರಮಾನಾಥ ರೈ ಒಪ್ಪಿಗೆ ಸೂಚಿಸಿದರು.