Asianet Suvarna News Asianet Suvarna News

ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟು ದರ ಹೆಚ್ಚಳ

ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ದರ ಹೆಚ್ಚಳ | ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಇಲ್ಲ |  ಶುಲ್ಕ 5000 ರು.ನಿಂದ 17000 ರು.ವರೆಗೆ ಏರಿಕೆ

State govt decides increase Private Engineering college govt quota fee
Author
Bengaluru, First Published Mar 3, 2019, 8:59 AM IST

ಬೆಂಗಳೂರು (ಮಾ.03): ಖಾಸಗಿ ಎಂಜಿ​ನಿ​ಯ​ರಿಂಗ್‌ ಕಾಲೇ​ಜು​ಗ​ಳಲ್ಲಿ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕಾಲೇಜುಗಳ ಸೀಟುಗಳಿಗೆ ಶೇ.10ರಷ್ಟುಶುಲ್ಕ 2019-20ನೇ ಸಾಲಿ​ನಿಂದ ಅನ್ವ​ಯ​ವಾ​ಗು​ವಂತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿದೆ. ಇದೇ ವೇಳೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಅನುದಾನಿತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಹಾಗೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳೊಂದಿಗೆ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಈ ವಿಷಯ ತಿಳಿಸಿ​ದ​ರು.

ಸದ್ಯ ಸರ್ಕಾರಿ ಕೋಟಾ ಸೀಟುಗಳಿಗೆ 2018-19ರಲ್ಲಿ 53,460 ರು. ಶುಲ್ಕವಿದ್ದು, 2019-20ಕ್ಕೆ 58,800 ರು.ಗಳಾಗಲಿದೆ. ಕಾಮೆಡ್‌-ಕೆ ಸೀಟುಗಳಿಗೆ 1,83,600 ರು. ಗಳಿದ್ದು, 2,01,960 ರು.ಗಳಾಗಲಿದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿರುವ ಸೀಟುಗಳಿಗೆ ಯಾವುದೇ ರೀತಿಯ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ನಿವೃತ್ತ ನ್ಯಾ. ಶೈಲೇಂದ್ರ ಕುಮಾರ್‌ ಸಮಿತಿಯ ಸಿಫಾರಸು ಮೇರೆಗೆ ಎಂಜಿನಿಯರಿಂಗ್‌ ಸೀಟುಗಳಿಗೆ ಶೇ.8ರಷ್ಟುಮಾತ್ರ ಶುಲ್ಕ ಹೆಚ್ಚಳ ಮಾಡಿತ್ತು. ಈ ಬಾರಿ 7ನೇ ವೇತನ ಆಯೋಗ ಅನುಷ್ಠಾನ ಹಿನ್ನೆಲೆಯಲ್ಲಿ ವೇತನ, ಇನ್ನಿತರ ಖರ್ಚು ವೆಚ್ಚಗಳು ಹೆಚ್ಚಳವಾಗಿರುವುದರಿಂದ ಶೇ.10ರಷ್ಟುಹೆಚ್ಚಳ ಮಾಡಲಾಗಿದೆ. ಖಾಸಗಿ ಕಾಲೇಜುಗಳು ಕನಿಷ್ಠ ಶೇ.15ರಿಂದ 25ರ ವರೆಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದವು. ಆದರೆ, ಅಂತಿಮವಾಗಿ ಶೇ.10ರಷ್ಟುಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹೊಸ ಸಮಿತಿ ಒಪ್ಪಿಗೆ?:

ಎಂಜಿನಿಯರಿಂಗ್‌ ಸೀಟುಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ ಪ್ರತಿ ವರ್ಷ ‘ಶುಲ್ಕ ನಿಯಂತ್ರಣ ಸಮಿತಿ’ ರಚನೆ ಮಾಡಲಾಗುತ್ತದೆ. ಕಳೆದ ವರ್ಷ ನಿವೃತ್ತ ನ್ಯಾ. ಶೈಲೇಂದ್ರಕುಮಾರ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಶೇ.8ರಷ್ಟುಶುಲ್ಕ ಮಾತ್ರ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಅಲ್ಲಿಯವರೆಗೂ ಶೇ.15ರಷ್ಟುಹೆಚ್ಚಳ ಮಾಡಲಾಗಿದೆ ಎಂದು ಹೇಳುತ್ತಿದ್ದ ಕಾಲೇಜುಗಳು ಅಂತಿಮವಾಗಿ ಸಮಿತಿ ನಿರ್ಣಯಕ್ಕೆ ಬದ್ಧವಾಗಿದ್ದವು.

ಈ ಬಾರಿಯೂ ಶೇ.10ರಷ್ಟುಹೆಚ್ಚಳ ಮಾಡಲು ನಿರ್ಧರಿಸಿದ್ದು, ಒಟ್ಟಾರೆ ಎರಡು ವರ್ಷಗಳಲ್ಲಿ ಶೇ.18 ರಷ್ಟುಹೆಚ್ಚಳ ಮಾಡಿದಂತಾಗಿದೆ. ಈವರೆಗೆ ಶುಲ್ಕ ನಿಯಂತ್ರಣ ಸಮಿತಿ ರಚಿಸಿಲ್ಲ. ಹೊಸ ಸಮಿತಿ ರಚನೆ ಮಾಡಿದರೆ, ಸರ್ಕಾರದ ನಿರ್ಣಯಗಳನ್ನು ಹೇಗೆ ಸ್ವೀಕರಿಸಲಿದೆ ಎಂದು ಕಾಯ್ದು ನೋಡಬೇಕಿದೆ.

Follow Us:
Download App:
  • android
  • ios