ಬಹು ನಿರೀಕ್ಷಿತ ಕಂಬಳ ಕ್ರೀಡೆ ಕುರಿತ ಮಸೂದೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ರಾಷ್ಟ್ರಪತಿಗೆ ಪುನಃ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು (ಮೇ.05): ಬಹು ನಿರೀಕ್ಷಿತ ಕಂಬಳ ಕ್ರೀಡೆ ಕುರಿತ ಮಸೂದೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ರಾಷ್ಟ್ರಪತಿಗೆ ಪುನಃ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕಂಬಳ ಹಾಗೂ ಉತ್ತರ ಕರ್ನಾಟಕದ ಎತ್ತಿನಗಾಡಿ ಓಟದ ಸ್ಪರ್ಧೆ ಕುರಿತ ವಿಧೇಯಕ ವಾಪಸ್ ಬಂದಿದ್ದರಿಂದ ಕೆಲ ತಿದ್ದುಪಡಿಗಳೊಂದಿಗೆ ಮತ್ತೆ ರಾಷ್ಟ್ರಪತಿ ಅವರಿಗೆ ಸಲ್ಲಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಂಬಳ ಮತ್ತು ಎತ್ತಿನಗಾಡಿ ಓಟ ಕ್ರೀಡೆಗೆ ನೆರವಾಗುವಂತೆ ಸರ್ಕಾರ ವಿಧೇಯಕ ರಚಿಸಿತ್ತು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ಮಸೂದೆ-೨೦೧೭ ರಚಿಸಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ-೧೯೬೦ಕ್ಕೆ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ರಾಷ್ಟ್ರಪತಿ ಕಚೇರಿಯು ಕೆಲವು ತಿದ್ದುಪಡಿಗಳನ್ನು ಬಯಸಿದ್ದರಿಂದ ಅದನ್ನು ಸರಿಪಡಿಸಿ ಕಳುಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಸಮ್ಮತಿಸಿದೆ.