ರಾಜ್ಯದಲ್ಲಿ ಬರೋಬ್ಬರಿ 90,000 ಉದ್ಯೋಗಗಳ ಸೃಷ್ಟಿ

State Govt Create 90 thousand Jobs
Highlights

ಕಳೆದ ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ 12,296 ಕೋಟಿ ರು. ಬಂಡವಾಳ ಹೂಡಿಕೆಯ 94 ಯೋಜನೆಗಳಿಗೆ ಅನುಮೋದನೆ ನೀಡಿದ್ದು, 93,357 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬೆಂಗಳೂರು : ಕಳೆದ ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ 12,296 ಕೋಟಿ ರು. ಬಂಡವಾಳ ಹೂಡಿಕೆಯ 94 ಯೋಜನೆಗಳಿಗೆ ಅನುಮೋದನೆ ನೀಡಿದ್ದು, 93,357 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆ.23ರಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ ಐದು ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 6706.15 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, 59,200 ಉದ್ಯೋಗಗಳು ಲಭ್ಯವಾಗಲಿವೆ.

ಜ.30ರಂದು, ಫೆ.15 ಮತ್ತು 27ರಂದು ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ 5591.40 ಕೋಟಿ ರು. ಹೂಡಿಕೆಯ 89 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಅವುಗಳಿಂದ 34057 ಉದ್ಯೋಗಗಳು ಲಭಿಸಲಿವೆ. ಒಟ್ಟಾರೆಯಾಗಿ 12,296 ಕೋಟಿ ರು. ಹೂಡಿಕೆಯ 94 ಯೋಜನೆಗಳಿಗೆ ಹಸಿರು ನಿಶಾನೆ ನೀಡಲಾಗಿದೆ.

ಇದರಿಂದ 93,357 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಫೆ.23ರ ಸಭೆಯಲ್ಲಿ ಸಾಫ್ಟ್‌ವೇರ್, ಎಲೆಕ್ಟ್ರಾನಿಕ್ಸ್, ಬ್ಯಾಟರಿ ಸೇರಿದಂತೆ ಇತರೆ ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ. ವೆಸ್ಟ್ರೋನ್ ಇನ್‌ಫೋಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಸಂಸ್ಥೆ ಕೋಲಾರದ ಅಕ್ಕಚಾತನಹಳ್ಳಿ ಗ್ರಾಮದ ಬಳಿ 43 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. 682 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಸ್ಮಾರ್ಟ್ ಫೋನ್, ಬಯೋಟೆಕ್ ಉಪಕರಣಗಳ ಉತ್ಪನ್ನ ಘಟಕವು ತಲೆ ಎತ್ತಲಿದೆ.

ಸುಮಾರು ಆರು ಸಾವಿರ ಮಂದಿಗೆ ಉದ್ಯೋಗ ಲಭ್ಯವಾಗಲಿದೆ. ಸತ್ಲೇಜ್ ಟೆಕ್ಸ್‌ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಲಿ. ಸಂಸ್ಥೆ ಚಾಮರಾಜನಗರದ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 46 ಎಕರೆಯಲ್ಲಿ ಆರಂಭಗೊಳ್ಳಲಿದ್ದು, 786 ಕೋಟಿ ರು. ಹೂಡಿಕೆ ಮಾಡಿ 1800 ಉದ್ಯೋಗ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಾಲಗ ಗ್ರಾಮದ ಬಳಿ ಅಂಜಲಿತಾಯ್ ಕೇನ್ಸ್ ಪ್ರೈ ಸಂಸ್ಥೆಯು ಆರಂಭವಾಗಲಿದ್ದು, 532 ಕೋಟಿ ರು. ಹೂಡಿಕೆಯಲ್ಲಿ ಸಕ್ಕರೆ ಘಟಕ ಸ್ಥಾಪನೆಯಾಗಲಿದೆ.

ಇಲ್ಲಿ 800 ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರಿನ ದೊಡ್ಡನೆಕ್ಕುಂದಿ ಗ್ರಾಮದ ಬಳಿ ಬಿಪಿಕೆ ಡೆವಲಪ್‌ಮೆಂಟ್ಸ್ ಎಲ್‌ಎಲ್‌ಪಿ ಸಂಸ್ಥೆಯು ಸ್ಥಾಪನೆಯಾಗಲಿದ್ದು, ಐಟಿ ಕಚೇರಿಗಳು, ಹೋಟೆಲ್ ಗಳು ಆರಂಭವಾಗಲಿವೆ. 3495.15 ಕೋಟಿ ರು. ವೆಚ್ಚದಲ್ಲಿ ಆರಂಭವಾಗುವ ಘಟಕದಲ್ಲಿ 50 ಸಾವಿರ ಉದ್ಯೋಗಗಳು ಲಭ್ಯವಾಗಲಿವೆ ಎಂದು ಅಂದಾಜಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ ಅಂಪೀರಿಯಾ ಲೀಥಿಯಂ ಬ್ಯಾಟರಿ ಮ್ಯಾನ್ಯುಫ್ಯಾಕ್ಚರಿಂಗ್ ಸಂಸ್ಥೆ ಆರಂಭವಾಗಲಿದೆ. ವಿದ್ಯುತ್ ಚಾಲಿತ ವಾಹನಗಳಿಗೆ ಲೀಥಿಯಂ ಬ್ಯಾಟರಿ ತಯಾರಿಕೆ ಮಾಡುವ ಸಂಸ್ಥೆ ಇದಾಗಿದೆ. 1210 ಕೋಟಿ ರು. ವೆಚ್ಚದಲ್ಲಿ ತಲೆ ಎತ್ತುವ ಸಂಸ್ಥೆಯಲ್ಲಿ 600 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

 ಜ.30ರಂದು, ಫೆ.15 ಮತ್ತು 27ರಂದು ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ ರಾಸಾಯನಿಕ, ಮೂಲಸೌಕರ್ಯ, ಆಹಾರ, ಪ್ಲಾಸ್ಟಿಕ್/ರಬ್ಬರ್ ಸೇರಿದಂತೆ ವಿವಿಧ ಕ್ಷೇತ್ರದ ಕೈಗಾರಿಕೆಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮೀಣ, ಬಳ್ಳಾರಿ, ಧಾರವಾಡ, ಕೊಡಗು, ಕೋಲಾರ, ಮೈಸೂರು, ರಾಯಚೂರು, ತುಮಕೂರು, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಉತ್ತರ ಕನ್ನಡ, ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳು ಆರಂಭವಾಗಲಿವೆ ಎಂದು ಹೇಳಿದರು.

loader