ನವದೆಹಲಿ[ಆ.28]: ಕಾಶ್ಮೀರದಲ್ಲಾಗುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ನೀಡುವ ಕುಮ್ಮಕ್ಕೇ ಕಾರಣ. ಕಾಶ್ಮೀರ ಭಾರತದ ಆಂತರಿಕ ವಿಚಾರ. ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಪಾಕಿಸ್ತಾನಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ರಾಹುಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪಾಕ್ ಸಚಿವ 'ಕನ್‌ಫ್ಯೂಸ್‌ ಆಗಬೇಡಿ' ಎಂದು ಲೇವಡಿ ಮಾಡಿದ್ದಾರೆ.

ಕಾಶ್ಮೀರ ಭಾರತದ ಆಂತರಿಕ ವಿಚಾರ, ಹಿಂಸಾಚಾರಕ್ಕೆ ಪಾಕ್ ಕುಮ್ಮಕ್ಕು ಕಾರಣ: ರಾಹುಲ್ ಗಾಂಧಿ

ಹೌದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದ ಕೇಂದ್ರದ ನಿರ್ಧಾರವನ್ನು ಟೀಕಿಸುತ್ತಲೇ ಬಂದಿದ್ದ ರಾಹುಲ್ ಗಾಂಧಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹೊರ ಜಗತ್ತಿಗೆ ತಿಳಿಯದಂತೆ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡುವೆ ಇಂದು ಮಂಗಳವಾರ ಟ್ವೀಟ್ ಒಂದನ್ನು ಮಾಡಿದ್ದ 'ಸರ್ಕಾರದ ಮೇಲೆ ಸಿಟ್ಟಿದೆ ನಿಜ, ಆದ್ರೆ ಕಾಶ್ಮೀರ ಭಾರತದ ಆಂತರಿಕ ವಿಚಾರ. ಇದರಲ್ಲಿ ಪಾಕಿಸ್ತಾನ ಅಥವಾ ಇತರ ರಾಷ್ಟ್ರಗಳಿಗೆ ಹಸ್ತಕ್ಷೇಪ ಮಾಡುವ ಅಧಿಕಾವಿಲ್ಲ' ಎಂದಿದ್ದರು. ಅಲ್ಲದೇ ಕಾಶ್ಮೀರದಲ್ಲಾಗುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದಿದ್ದರು.

ಸದ್ಯ ಕಾಂಗ್ರೆಸ್ ನಾಯಕನ ಈ ಟ್ವೀಟ್‌ಗೆ ಪಾಕಿಸ್ತಾನದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಪ್ರತಿಕ್ರಿಯಿಸಿದ್ದು, 'ನಿಮ್ಮ ರಾಜಕೀಯ ಜೀವನದಲ್ಲಿ ಗೊಂದಲ ಬಹುದೊಡ್ಡ ಸಮಸ್ಯೆಯಾಗಿದೆ. ವಾಸ್ತವತೆ ಕಡೆ ಗಮನಹರಿಸಿ. ಜಾತ್ಯಾತೀತ ಹಾಗೂ ವಿಶಾಲ ಮನೋಭಾವದವರಾಗಿದ್ದ ನಿಮ್ಮ ಮುತ್ತಾತನಂತೆ ಯೋಚಿಸಿ ನಿರ್ಧಾರ ಕೈಗೊಳ್ಳಿ' ಎಂದು ತಿವಿದಿದ್ದಾರೆ