ಬೆಂಗಳೂರು[ಜು.12]: ಕರ್ನಾಟಕ ವಸತಿ ಮಹಾಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಎಸ್‌.ಟಿ.ಸೋಮಶೇಖರ್‌ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ. ಗುರುವಾರ ನಗರದ ಬಸವನಗುಡಿಯಲ್ಲಿರುವ ಮಹಾಮಂಡಳಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸೋಮಶೇಖರ್‌ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಐದನೇ ಬಾರಿಗೆ ಸೋಮಶೇಖರ್‌ ಮಹಾಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜು.6ರಂದು ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಿದ್ದ ಸೋಮಶೇಖರ್‌, ಗುರುವಾರ ವಸತಿ ಮಹಾಮಂಡಳಿಯ ಚುನಾವಣೆ ನಿಗದಿಯಾಗಿದ್ದರಿಂದ ಬುಧವಾರ ರಾತ್ರಿಯೇ ನಗರಕ್ಕೆ ಆಗಮಿಸಿ, ರಹಸ್ಯ ಸ್ಥಳದಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್‌ ಭದ್ರತೆಯಲ್ಲಿ ಮಹಾಮಂಡಳಿಯ ಕಚೇರಿಗೆ ಆಗಮಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಮಹಾಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ಈ ನಡುವೆ ಬಿಜೆಪಿಯ ಶಾಸಕರಾದ ವಿ.ಸೋಮಣ್ಣ ಹಾಗೂ ಎಸ್‌.ಆರ್‌.ವಿಶ್ವನಾಥ್‌ ಮಹಾಮಂಡಳಿಯ ಕಚೇರಿ ಬಳಿ ಕಾಣಿಸಿಕೊಂಡರು. ಅಲ್ಲದೆ, ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಸೋಮಶೇಖರ್‌ ಅವರು ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಜತೆಗೆ ತೆರಳಿದರು.