ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭಗೊಂಡಿದ್ದು 8.77 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಪರೀಕ್ಷಾ ಸುರಕ್ಷಾ ಪದ್ದತಿ ಅನ್ವಯ ಕಟ್ಟುನಿಟ್ಟಿನ ಭದ್ರತೆಯ ಅಡಿಯಲ್ಲಿ ಪರೀಕ್ಷೆ ಸರಾಗವಾಗಿ ನಡೆದಿದೆ.
ಬೆಂಗಳೂರು (ಮಾ.30): ಹೊಸ ಪದ್ದತಿಯೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ ಪ್ರಕರಣ ಬಿಟ್ಟರೆ ರಾಜ್ಯದಲ್ಲಿ ಪರೀಕ್ಷೆ ಶಾಂತಿಯುತವಾಗಿ ಆರಂಭವಾಗಿದೆ.
ಆತಂಕದಿಂದ ಪ್ರವೇಶ ಪ್ರತಿ ನೋಡುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಚೆನ್ನಾಗಿ ಪರೀಕ್ಷೆ ಬರೆಯುವಂತೆ ಶುಭ ಹಾರೈಸುತ್ತಿರುವ ಪೋಷಕರ ದೃಶ್ಯ ಎಂದು ಎಲ್ಲಾ ಕಡೆ ಸಾಮಾನ್ಯವಾಗಿತ್ತು.
ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭಗೊಂಡಿದ್ದು 8.77 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಪರೀಕ್ಷಾ ಸುರಕ್ಷಾ ಪದ್ದತಿ ಅನ್ವಯ ಕಟ್ಟುನಿಟ್ಟಿನ ಭದ್ರತೆಯ ಅಡಿಯಲ್ಲಿ ಪರೀಕ್ಷೆ ಸರಾಗವಾಗಿ ನಡೆದಿದೆ.
ಇದೇ ಮೊಟ್ಟ ಮೊದಲ ಬಾರಿಗೆ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಿದ್ದು ಯಾವುದೇ ಗೊಂದಲವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.
ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕಿ ಯಶೋಧಾ ಬೋಪಣ್ಣ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು..
ದ್ವಿತೀಯ ಪಿಯು ಪರೀಕ್ಷೆ ಈ ಬಾರಿ ಯಾವುದೇ ಗೊಂದಲವಿಲ್ಲದೆ ಮುಕ್ತಾಯವಾಗಿದೆ. ಇದೇ ಒತ್ತಡ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೇಲೂ ಇದ್ದು ರಾಜ್ಯದ ಎಲ್ಲ ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. 24 ಗಂಟೆಯೂ ಎಸ್ಎಸ್ಎಲ್ಸೀ ಬೋರ್ಡ್ ನಲ್ಲಿ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆದಿದ್ದಾರೆ. ಮೊದಲ ದಿನ 8 ಪ್ರಥಮ ಭಾಷೆಯ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳು ಖುಷಿ ಖುಷಿಯಿಂದಲೇ ಪರೀಕ್ಷೆ ಬರೆದು ಹೊರಬಂದಿದ್ದಾರೆ.
ಇನ್ನು ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಿರುವ ಬಗ್ಗೆ ವರದಿಯಾಗಿದೆ.ಇದರ ಹೊರತಾಗಿ ರಾಜ್ಯದಲ್ಲಿ ಪರೀಕ್ಷೆ ಸುಗಮಾವಾಗಿ ನಡೆದಿದ್ದು, ಏಪ್ರಿಲ್ 12ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜರುಗಲಿದೆ.
ವರದಿ: ಗಣೇಶ್ ಹೆಗಡೆ, ಬೆಂಗಳೂರು
