ಇಂದಿನಿಂದ ಎಸ್’ಎಸ್’ಎಲ್’ಸಿ ಪರೀಕ್ಷೆ ಶುರು

news | Friday, March 23rd, 2018
Suvarna Web Desk
Highlights

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುಕ್ರವಾರದಿಂದ (ಮಾ.23) ರಾಜ್ಯದ 2,817 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾಗಲಿವೆ. ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಲ್ಲಿ 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶೇ.100ರಷ್ಟುಸಿಸಿಟೀವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.

ಬೆಂಗಳೂರು (ಮಾ.23):  ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುಕ್ರವಾರದಿಂದ (ಮಾ.23) ರಾಜ್ಯದ 2,817 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾಗಲಿವೆ. ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಲ್ಲಿ 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶೇ.100ರಷ್ಟುಸಿಸಿಟೀವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.

ಮೊದಲ ದಿನವಾದ ಶುಕ್ರವಾರ ಬೆಳಗ್ಗೆ 9.30ಕ್ಕೆ ಕನ್ನಡ ಸೇರಿದಂತೆ ಎಲ್ಲ ಪ್ರಥಮ ಭಾಷಾ ಪರೀಕ್ಷೆಗಳು ಆರಂಭವಾಗಲಿದ್ದು, ಮೊದಲ ದಿನ ವಿದ್ಯಾರ್ಥಿಗಳು ಕನಿಷ್ಠ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದು, ತಮಗೆ ಮೀಸಲಾದ ಜಾಗವನ್ನು ಗುರುತಿಸಿಕೊಳ್ಳುವುದು ಉತ್ತಮ. ಯಾವುದೇ ಗೊಂದಲಗಳಿಗೆ ಒಳಗಾಗದೆ ಪರೀಕ್ಷೆ ಬರೆಯಿರಿ. ಪರೀಕ್ಷೆ ಎದುರಿಸುತ್ತಿರುವ ನಿಮಗೆಲ್ಲಾ ಶುಭವಾಗಲಿ.

ವಿದ್ಯಾರ್ಥಿಗಳು ಪರೀಕ್ಷಾ ಸಮಯವಾವಕಾಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆರಂಭದಲ್ಲೇ ಯೋಚನೆ ಮಾಡಿಕೊಂಡು ಸಮಯ ಹಾಳು ಮಾಡಿಕೊಳ್ಳಬಾರದು. ಮೊದಲು ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಬರೆದು ಮುಗಿಸಬೇಕು. ನಂತರ ಉಳಿದ ಸಮಯಾವಕಾಶದಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಬೇಕು. ಯಾವ ಪ್ರಶ್ನೆಗೂ ಉತ್ತರಿಸದೆ ಬರಬಾರದು. ಕನಿಷ್ಠ ಎಷ್ಟುಪ್ರಮಾಣದಲ್ಲಿ ಉತ್ತರ ಗೊತ್ತಿರುತ್ತದೆಯೋ ಅಷ್ಟನ್ನಾದರೂ ಬರೆಯಲು ಪ್ರಯತ್ನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ರಾಜ್ಯದ 14,385 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, 1,011 ಕ್ಲಸ್ಟರ್‌ ಕೇಂದ್ರ ಹಾಗೂ 1807 ನಾನ್‌ ಕ್ಲಸ್ಟರ್‌ ಕೇಂದ್ರಗಳಿವೆ. 45 ಕೇಂದ್ರಗಳನ್ನು ಸೂಕ್ಷ್ಮ ಮತ್ತು 23 ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿ ಮೊಬೈಲ್‌ ಫೋನ್‌ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಸ್ತರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಗುರುತಿನ ಚೀಟಿ ನೀಡಿದೆ.

21 ವಿಭಾಗೀಯ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಒಟ್ಟು 2,043 ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರಾಗಿ ನೇಮಕಾತಿ ಮಾಡಿದೆ. 406 ಡಯಟ್‌ ಉಪನ್ಯಾಸಕರನ್ನು ಜಾಗೃತದಳದ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಕರೆ ಮಾಡಿ:

ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಯಾವುದೇ ಗೊಂದಲಗಳನ್ನು ಮಂಡಳಿಯ ‘ಸಹಾಯವಾಣಿ’ 080-23310075, 76 ಗೆ ಕರೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಪರೀಕ್ಷಾ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

Comments 0
Add Comment