ಪಿಯುಸಿ ರೀತಿ ಎಸ್'ಎಸ್'ಎಲ್'ಸಿಗೂ ಸುಭದ್ರ ಪರೀಕ್ಷಾ ವ್ಯವಸ್ಥೆ

First Published 22, Jan 2018, 11:36 AM IST
SSLC Exam
Highlights

ದ್ವಿತೀಯ ಪಿಯು ಪರೀಕ್ಷೆಗೆ ನೀಡಿರುವಷ್ಟೇ ಭದ್ರತೆಯನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ನೀಡಲು ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸುತ್ತಿದೆ.

ಬೆಂಗಳೂರು (ಜ.22): ದ್ವಿತೀಯ ಪಿಯು ಪರೀಕ್ಷೆಗೆ ನೀಡಿರುವಷ್ಟೇ ಭದ್ರತೆಯನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ನೀಡಲು ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸುತ್ತಿದೆ.

ಪರೀಕ್ಷಾ ನಿಯಮಗಳನ್ನು ಕಠಿಣಗೊಳಿಸುವ ಜತೆಗೆ ಅಗತ್ಯ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇನ್ನು ಮುಂದೆ  ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿವೆ. ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಗಾಗಿ ‘ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಂ’ ಜಾರಿಗೊಳಿಸಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಮಹತ್ವ ನೀಡಲು ನಿರ್ಧರಿಸಿದೆ.

ಪ್ರಶ್ನೆಪತ್ರಿಕೆ ಮುದ್ರಣ ಕಾರ್ಯದಿಂದ ಪ್ರಾರಂಭವಾಗಿ ಪ್ರಶ್ನೆ ಪತ್ರಿಕೆ ಇರುವ ಖಜಾನೆಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ರವಾನೆಯಾಗುವಾಗ ವಿಡಿಯೋ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆಯಾಗಲಿದೆ. ಪರೀಕ್ಷಾ ಕೇಂದ್ರದ ಪ್ರತಿಯೊಂದು ಚಟುವಟಿಕೆಗಳು ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿವೆ. ಮುದ್ರಣವಾಗಿರುವ ಪ್ರಶ್ನೆಪತ್ರಿಕೆ ಬಂಡಲ್'ಗಳನ್ನು ಖಜಾನೆಯಲ್ಲಿ ಸ್ವೀಕರಿಸುವ ವೇಳೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ಬಂಡಲ್ ತೆರೆಯುವ ಸಂದರ್ಭದಲ್ಲಿ ಬಾರ್'ಕೋಟ್ ಸ್ಕ್ಯಾನ್ ಮಾಡಿ ತೆರೆಯಲಾಗುತ್ತದೆ.

ಸಿಸಿಟಿವಿ ಅಳವಡಿಸಲಿರುವ ಹಿನ್ನೆಲೆಯಲ್ಲಿ ಖಜಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸುವವರ ಚಲನವಲನಗಳ ದೃಶ್ಯಾವಳಿಗಳು ಸೆರೆಯಾಗಲಿವೆ. ಇಲ್ಲಿಯವರೆಗೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳು ಹಾಗೂ ಕೆಲವು ಖಾಸಗಿ ಶಾಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಇನ್ನು ಮುಂದೆ ಎಲ್ಲ ಕೇಂದ್ರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಮತ್ತಷ್ಟು ಕ್ರಮಗಳು: ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಸರ್ಕಾರಿ  ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಫೆ.15  ರೊಳಗೆ ಸಿಸಿಟಿವಿ ಅಳವಡಿಕೆಗೆ ತಿಳಿಸಲಾಗಿದೆ. ಬಿಇಒ, ಡಿಡಿಪಿಐ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಭದ್ರತಾ ತಂಡಗಳನ್ನು ರಚಿಸಲಾಗಿದೆ.

  

loader