ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ನಟಿ ಶ್ರುತಿ ಹರಿಹರನ್‌ ಅವರು, ‘ವಿಸ್ಮಯ’ ಸಿನಿಮಾದ ಚಿತ್ರೀಕರಣ ಸಂದ​ರ್ಭ​ದಲ್ಲಿ ಅರ್ಜುನ್‌ ಸರ್ಜಾ ಅವರು ನಾಲ್ಕು ತಾಣ​ಗ​ಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆ​ಸಿ​ದ್ದಾಗಿ ಹೇಳಿದ್ದಾರೆ.

ಬೆಂಗಳೂರು :  ಹಿರಿಯ ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ನಟಿ ಶ್ರುತಿ ಹರಿಹರನ್‌ ಅವರು, ‘ವಿಸ್ಮಯ’ ಸಿನಿಮಾದ ಚಿತ್ರೀಕರಣ ಸಂದ​ರ್ಭ​ದಲ್ಲಿ ಅರ್ಜುನ್‌ ಸರ್ಜಾ ಅವರು ನಾಲ್ಕು ತಾಣ​ಗ​ಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆ​ಸಿ​ದರು ಎಂದು ದೂರಿನಲ್ಲಿ ತಿಳಿ​ಸಿ​ದ್ದಾ​ರೆ.

ಈ ಎಲ್ಲಾ ಘಟ​ನೆ​ಗಳು 2015 ನವೆಂಬರ್‌ನಿಂದ 2016ರ ಜೂನ್‌ವರೆಗೆ ‘ವಿಸ್ಮಯ’ ಚಲನಚಿತ್ರ ಚಿತ್ರೀಕರಣದ ವೇಳೆ ನಡೆದಿವೆ. ಸರ್ಜಾ ಅವರು, ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು, ದೇವನಹಳ್ಳಿ ಆಸ್ಪತ್ರೆ, ದೇವ​ನ​ಹಳ್ಳಿ ಮಾರ್ಗದ ನಡು​ವಿನ ಟ್ರಾಫಿಕ್‌ ಸಿಗ್ನಲ್‌ ಹಾಗೂ ಯುಬಿ ಸಿಟಿಯಲ್ಲಿ ನಡೆದ ಚಿತ್ರೀಕರಣದ ವೇಳೆ ನನ್ನೊಂದಿಗೆ ಎಲ್ಲೆ ಮೀರಿದ ವರ್ತನೆ ತೋರಿ ಲೈಂಗಿಕ ಆಸಕ್ತಿ ವ್ಯಕ್ತಪಡಿಸಿದ್ದರು ಎಂದು ಶ್ರುತಿ ಆರೋಪಿಸಿದ್ದಾರೆ. ಈ ಬಗ್ಗೆ ನೀಡಿರುವ ಐದು ಪುಟಗಳ ದೂರಿನಲ್ಲಿ ತನ್ನ ಮೇಲಿನ ಲೈಂಗಿಕ ಕಿರುಕುಳ ಹಾಗೂ ಆನಂತರ ತಾವು ಮಾನಸಿಕವಾಗಿ ಎದುರಿಸಿದ ಸಂಕಷ್ಟಪರಿಸ್ಥಿತಿಯನ್ನು ವಿವರಿಸಿದ್ದಾರೆ.

2015, ನವೆಂಬರ್‌- ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು:

‘ವಿಸ್ಮಯ’ ಹೆಸರಿನ ಸಿನಿಮಾದಲ್ಲಿ ರಂಜಿತ್‌ ಕಾಳಿದಾಸ್‌ (ಸರ್ಜಾ ಪತ್ನಿ) ಪಾತ್ರದಲ್ಲಿ ನಟಿಸಿದ್ದೆ. ಅಂದು ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು ಆವರಣದ ಬಂಗಲೆಯಲ್ಲಿ ಆ ಚಲನಚಿತ್ರದ ಚಿತ್ರೀಕರಣ ನಡೆಯಿತು. ಬೆಳಗ್ಗೆ 7.30ಕ್ಕೆ ಚಿತ್ರೀಕರಣ ಸೆಟ್‌ಗೆ ತೆರಳಿದೆ. ಸಂಜೆ 6 ಗಂಟೆವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ.

ಆ ದಿನ ರೊಮ್ಯಾಂಟಿಕ್‌ ದೃಶ್ಯದ ಶೂಟಿಂಗ್‌ ವೇಳೆ ನನ್ನನ್ನು ಅಪ್ಪಿಕೊಂಡು ಸೊಂಟದಿಂದ ಬೆನ್ನಿನವರೆಗೆ ಸರ್ಜಾ ಸವರಿದರು. ಇದು ನನಗೆ ಇರಿಸುಮುರುಸು ತಂದಿತು. ಈ ಹಂತದಲ್ಲಿ ಪ್ರತಿರೋಧ ತೋರಿದೆ. ಆಗ ಬಟ್ಟೆಎಳೆದಾಡಿ ತೊಡೆಯನ್ನೂ ಮುಟ್ಟಿದರು. ಅವರು ಎಲ್ಲೆ ಮೀರಿ ವರ್ತಿ​ಸು​ತ್ತಿ​ರು​ವುದು ಅರಿ​ವಿಗೆ ಬಂದರೂ, ನಾನು ಆಗಷ್ಟೇ ಚಿತ್ರರಂಗ ಪ್ರವೇಶಿಸಿದ್ದರಿಂದ ಆ ನೋವನ್ನು ಬಹಿರಂಗವಾಗಿ ಹೇಳಲು ಧೈರ್ಯವಾಗ​ಲಿ​ಲ್ಲ.

ಇದಾದ ನಂತರ ರಿಹರ್ಸಲ್‌ ವೇಳೆಯೂ ಸರ್ಜಾ ನನ್ನನ್ನು ಗಟಿಯಾಗಿ ತಬ್ಬಿಕೊಂಡರು. ಬೆನ್ನಿನ ಮೇಲೆ ಕೈ ಆಡಿಸುತ್ತ, ‘ಆ ದೃಶ್ಯವನ್ನು ಈ ರೀತಿಯಾಗಿ ಸುಧಾರಣೆ (ಇಂಪ್ರೂವೈಸ್‌) ಮಾಡಬಹುದೇ’ ಎಂದು ನಿರ್ದೇಶಕರನ್ನು ಕೇಳಿದರು. ಕೂಡಲೇ ಅವರ ಬಾಹು ಬಂಧನದಿಂದ ಬಿಡಿಸಿಕೊಂಡು ನಿರ್ದೇಶಕರ ಬಳಿ ತೆರಳಿ ಆಕ್ಷೇಪಿಸಿದೆ. ಅಲ್ಲದೆ, ಹೀಗೆಲ್ಲ ನಟಿಸಲು ನನಗೆ ಇಷ್ಟವಿಲ್ಲವೆಂದಿದ್ದೆ. ಈ ಮಾತಿಗೆ ನಿರ್ದೇಶಕರು ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ. ಇದರಿಂದ ನನಗೆ ತುಂಬಾ ನೋವಾಯಿತು. ತಕ್ಷಣವೇ ಕ್ಯಾರವಾನ್‌ಗೆ ತೆರಳಿ ಹತಾಶೆಯಿಂದ ಜೋರಾಗಿ ಕಿರುಚಿದೆ. ಕಣ್ಣೀರು ಹಾಕಿದೆ. ಆಗ ನನ್ನನ್ನು ನನ್ನ ಆಪ್ತ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್‌ ಸಂತೈಸಿದರು. ಅವರಿಗೆ ಎಲ್ಲಾ ಹೇಳಿದೆ.

ಆ ಸಿನಿಮಾದ ಇನ್ನೊಂದು ದೃಶ್ಯದಲ್ಲಿ ನಾವಿಬ್ಬರೂ ಅಪ್ಪಿಕೊಂಡು ಮಂಚದ ಮೇಲೆ ಉರುಳಬೇಕಿತ್ತು. ಆ ಪರಿಸ್ಥಿತಿಯ ಲಾಭ ಪಡೆದ ಸರ್ಜಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡರು. ಈ ದೃಶ್ಯದ ಶೂಟ್‌ ಮುಗಿದ ಕೂಡಲೇ ಅವರಿಂದ ಕೈ ಬಿಡಿಸಿಕೊಂಡು ಹೋಗಿ ಸಹ ನಿರ್ದೇಶಕ ಭರತ್‌ ನೀಲಕಂಠ ಹಾಗೂ ಮೋನಿಕಾ ಬಳಿ ಅಳಲು ತೋಡಿಕೊಂಡಿದ್ದೆ. ಆಗ ಪರಿಸ್ಥಿತಿ ಅರಿತ ಅವರು, ಇನ್ನು ಮುಂದೆ ರಿಹರ್ಸಲ್‌ ಬೇಡ. ನೇರವಾಗಿ ಚಿತ್ರೀಕರಣ ಮಾಡೋಣ ಎಂದಿದ್ದರು. ಅವರಿಗೆಲ್ಲಾ ಸರ್ಜಾ ವರ್ತನೆ ಗೊತ್ತಿದೆ.

2015 ಡಿಸೆಂಬರ್‌-ದೇವನಹಳ್ಳಿ ಆಸ್ಪತ್ರೆ:

ದೇವನಹಳ್ಳಿಯ ಆಸ್ಪತ್ರೆಯೊಂದರಲ್ಲಿ ಬೆಳಗ್ಗೆ 7.30ರಿಂದ ಸಂಜೆ 7 ಗಂಟೆವರೆಗೆ ಚಿತ್ರೀಕರಣವಿತ್ತು. ಆಗಲೂ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡ ಸರ್ಜಾ, ನನಗೆ ಖಾಸಗಿಯಾಗಿ ಸಮಯ ಕಳೆಯಲು ರೂಮಿಗೆ ಬರುವಂತೆ ಹೇಳಿದರು. ಈ ವರ್ತನೆಯು ಲೈಂಗಿಕ ಆಸಕ್ತಿ ಹೊರತು ಮತ್ತೇನೂ ಅಲ್ಲ ಎಂಬುದು ತಿಳಿಯಿತು.

2015-ಡಿಸೆಂಬರ್‌, ದೇವನಹಳ್ಳಿ ಟ್ರಾಫಿಕ್‌ ಸಿಗ್ನಲ್‌:

ನನ್ನ ಸಿಬ್ಬಂದಿ ಜತೆ ದೇವನಹಳ್ಳಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದೆ. ಆಗ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದೆವು. ಅದೇ ವೇಳೆ ತಮ್ಮ ಕಾರಿನಲ್ಲಿ ಬಂದ ಸರ್ಜಾ, ನನ್ನ ಕಾರಿನ ಪಕ್ಕದಲ್ಲೇ ಕಾರು ನಿಲ್ಲಿಸಿದರು. ಬಳಿಕ ಕಾರ್‌ ಗ್ಲಾಸ್‌ ತೆಗೆದು ನನ್ನನ್ನು ಕೂಗಿದರು. ಅವರ ಕಡೆ ತಿರುಗಿದಾಗ, ರೆಸಾರ್ಟ್‌ಗೆ ಬಾ ಎಂದು ಕರೆದರು. ಯಾವ ಉದ್ದೇಶಕ್ಕೆ ಎಂದು ಕೇಳಿದಾಗ, ನಾವು ಮಧುರ ಕ್ಷಣಗಳನ್ನು ಕಳೆಯಲು. ನಾನು ಬಹಳ ದಿನಗಳಿಂದ ಕರೆಯುತ್ತಿದ್ದರೂ ನೀನು ಬರುತ್ತಿಲ್ಲ. ಈ ದಿನ ನಾನು ಬಿಡುವಾಗಿದ್ದೇನೆ. ನನ್ನ ಕೊಠಡಿಯಲ್ಲೂ ಯಾರೂ ಇಲ್ಲ, ಬಾ ಎಂದರು. ಈ ಆಹ್ವಾನ ನಿರಾಕರಿಸಿದ ನಾನು ಕಣ್ಣೀರಿಡುತ್ತಲೇ ಅಲ್ಲಿಂದ ಹೊರಟು ಹೋದೆ.

2016 ಜೂನ್‌ 18- ಯುಬಿ ಸಿಟಿ:

2016ರ ಜೂನ್‌ 18ರಂದು ಯುಬಿ ಸಿಟಿಯಲ್ಲಿ ಶೂಟಿಂಗ್‌ ಇತ್ತು. ನಾನು ಲಾಬಿಯಲ್ಲಿ ನಿಂತಿದ್ದಾಗ ಹಿಂದಿನಿಂದ ಬಂದು ತಬ್ಬಿಕೊಂಡ ಸರ್ಜಾ, ಇಲ್ಲೇಕೆ ನಿಂತಿದ್ದೀಯಾ. ರೂಮಿಗೆ ಬಾ ಎಂದು ಕರೆದರು. ಈ ಮಾತಿಗೆ ಒಪ್ಪದಿದ್ದಾಗ ಕೋಪಗೊಂಡ ಅವರು, ‘ಮುಂದೊಂದು ದಿನ ನೀನಾಗೆಯೇ ನನ್ನ ರೂಮಿಗೆ ಬರುವಂತೆ ಮಾಡುತ್ತೇನೆ ನೋಡುತ್ತಿರು. ಯಾರಿಗಾದರೂ ಹೇಳಿದರೆ ನಿನ್ನ ವೃತ್ತಿ ಜೀವನವನ್ನೇ ನಾಶಮಾಡುತ್ತೇನೆ. ಬದುಕೆಲ್ಲ ನರಕ ಯಾತನೆ ಅನುಭವಿಸುವಂತೆ ಮಾಡುತ್ತೇನೆ’ ಎಂದು ಬೆದರಿಸಿದರು.

ಯಾತನೆಯಲ್ಲೇ ದಿನ ಕಳೆದೆ-ಶ್ರುತಿ:

ಚಿತ್ರೀಕರಣ ಪೂರ್ಣಗೊಂಡ ಬಳಿಕ ಆಪ್ತ ಸ್ನೇಹಿತೆ ಯಶಸ್ವಿನಿ ಬಳಿ ಎಲ್ಲಾ ಘಟನಾವಳಿಗಳನ್ನು ಹೇಳಿಕೊಂಡೆ. ಆಗ ನನ್ನನ್ನು ಸಮಾಧಾನಪಡಿಸಿದ ಆಕೆ, ‘ಚಲನಚಿತ್ರ ರಂಗದಲ್ಲಿ ಅರ್ಜುನ್‌ ಸರ್ಜಾ ಬಹುದೊಡ್ಡ ನಟ. ತುಂಬಾ ಪ್ರಭಾವಿ ವ್ಯಕ್ತಿ. ಅವರ ವಿರುದ್ಧ ದನಿ ಎತ್ತಿದ್ದರೆ ನಿನಗೆ ಮುಳ್ಳಾಗಬಹುದು ಎಂದಳು. ನಿಜಕ್ಕೂ ನಾನು ಅಕ್ಷರಶಃ ಅಸಹಾಯಕಳಾದೆ. ಅನಿರೀಕ್ಷಿತವಾಗಿ ಎದುರಾದ ಅಸಹನೀಯ ಪರಿಸ್ಥಿತಿ ನೆನೆದು ಎಷ್ಟೋ ರಾತ್ರಿಗಳು ನಿದ್ರೆಯಿಲ್ಲದೆ ಕಳೆದಿದ್ದೆ. ಈಗ ದೇಶದೆಲ್ಲೆಡೆ ಮೀ ಟೂ ಅಭಿಯಾನವು ಮಹಿಳೆಯರ ಅಂತರಾಳದಲ್ಲಿ ಹುದುಗಿದ್ದ ನೋವನ್ನು ಹೊರಚೆಲ್ಲಲು ವೇದಿಕೆ ಕಲ್ಪಿಸಿತು. ನನಗೂ ಆ ಚಳವಳಿ ಆತ್ಮಸ್ಥೈರ್ಯ ತುಂಬಿತು. ಕೊನೆಗೆ ಚಲನಚಿತ್ರರಂಗದಲ್ಲಿ ನನಗಾದ ಕೆಟ್ಟಅನುಭವಗಳನ್ನು ವ್ಯಕ್ತಪಡಿಸಲು ನಿರ್ಧರಿಸಿದೆ. ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ, ಲೈಂಗಿಕವಾಗಿ ಶೋಷಿಸಿದ ಅರ್ಜುನ್‌ ಸರ್ಜಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಶ್ರುತಿ ಕೋರಿದ್ದಾರೆ.