ಬೆಂಗಳೂರು(ಮಾ.21): ಮಜಾ ಟಾಕೀಸ್‌' ಶೋನಲ್ಲಿ ‘ಮಚ್ಚು ಕೊಡ್ರೋ' ಅಂತ ಹೇಳುವ ಸೃಜನ್‌ ಲೋಕೇಶ್‌ ಅವರ ಫನ್ನಿ ಡೈಲಾಗ್‌ ಕೊಂಚ ವಿವಾದಕ್ಕೆ ತಿರುಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುಜಗಳ, ಮನಸ್ತಾಪ, ಟ್ರೋಲ್‌ ನಡೆದಿದ್ದು ನಿಮಗೇ ಗೊತ್ತು. ಈಗ ಆ ಶೋನಲ್ಲಿ ಆಡಿದ ಇನ್ನೊಂದು ಮಾತು ವಿವಾದಕ್ಕೆ ತಿರುಗಿದೆ. ಕಳೆದ ವೀಕೆಂಡ್‌ನಲ್ಲಿ ಪ್ರಸಾರವಾದ ಈ ಶೋನಲ್ಲಿ ಯಾರೋ ಪ್ರೇಕ್ಷಕರು, ‘ಸರ್ಕಾರಿ ಕೆಲಸ ದೇವರ ಕೆಲಸ ಅಂತ ಹೇಳ್ತಾರೆ, ಅದೇ ಐಟಿಯಲ್ಲಿ ಕೆಲಸ ಮಾಡುವವರನ್ನು ಏನಂತ ಕರೆಯಬಹುದು' ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ‘ಭೂತಾರಾಧನೆ ಅಂತ ಕರೀಬಹುದು, ಅದೂ ರಾತ್ರಿ ಮಾಡುವ ಕೆಲಸ, ಐಟಿಯವರದೂ ರಾತ್ರಿ ಮಾಡುವ ಕೆಲಸ' ಅಂತ ತಮಾ,ಎಯಾಗಿ ಉತ್ತರ ಕೊಡುತ್ತಾರೆ. 

ಇದರಿಂದ ಸೋಶಿಯಲ್‌ ಮೀಡಿಯಾಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಭೂತಾರಾಧನೆಯನ್ನು ತೀರಾ ಕೆಳಮಟ್ಟದಲ್ಲಿ ಐಟಿಗೆ ಹೋಲಿಸಿ ಮಾತಾಡಲಾಗಿದೆ, ಭಾವನೆಗೆ ಘಾಸಿ ಮಾಡಲಾಗಿದೆ ಅಂತ ಪ್ರತಿಭಟಿಸಿದ್ದಾರೆ. ಇದಕ್ಕೆಲ್ಲಾ ಉತ್ತರಿಸಿರುವ ಅವರು, ‘ಭೂತರಾಧನೆ ಬಗ್ಗೆ ನಾನು ತಮಾಷೆ ಮಾಡಿದೆ ಅಂತ ಕೆಲವು ಫೇಸ್‌ ಬುಕ್‌ ಪೋಸ್ಟ್‌ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ. ನಾನು ಸಹ ಭೂತರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ. ನನಗೆ ಅದರ ಅರಿವಿರುವುದರಿಂದಲೇ ನಾನು 'ಭೂತರಾಧನೆ' ಪ್ರಸ್ತಾಪಿಸಿದ್ದು. ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸೋ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನನಗಿರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ' ಎಂದು ಪ್ರಕರಣವನ್ನು ಅಲ್ಲಿಗೆ ಮುಗಿಸಿದ್ದಾರೆ ಸೃಜನ್‌ ಲೋಕೇಶ್‌.

ವರದಿ: ಕನ್ನಡ ಪ್ರಭ, ಸಿನಿ ವಾರ್ತೆ