1 ತಾಸಲ್ಲಿ ಹಾಸನ, ತುಮಕೂರಲ್ಲಿ ಶೇ.20 ಮತ: ರಾಮುಲು | ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ: ಶ್ರೀರಾಮುಲು
ಹುಬ್ಬಳ್ಳಿ (ಮೇ. 09): ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಸಂಜೆ 4ರಿಂದ 5 ಗಂಟೆ ನಡುವೆ ಒಂದು ತಾಸಿನಲ್ಲಿ ಶೇ.20ರಷ್ಟುಮತದಾನವಾಗಿದೆ ಎಂದು ಹೇಳಲಾಗಿದೆ. ಇದು ಹೇಗೆ ಸಾಧ್ಯ? ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ.
ಕುಂದಗೋಳ ಕ್ಷೇತ್ರದ ಅಂಚಟಗೇರಿಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಸಾಕಷ್ಟುಅವ್ಯವಹಾರಗಳಾಗಿವೆ. ಒಂದೇ ತಾಸಿನಲ್ಲಿ ಶೇ.20ರಷ್ಟುಮತದಾನ ಆಗಿದೆ. ಈ ಅಂಕಿ-ಸಂಖ್ಯೆಗಳನ್ನು ನೋಡಿದರೆ ಸಾಕು ಅಲ್ಲಿ ಅವ್ಯವಹಾರವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಅಲ್ಲಿ ಅಧಿಕಾರಿಗಳು ಕೈಕಟ್ಟಿಕುಳಿತಿದ್ದಾರೆ. ಅಧಿಕಾರಿಗಳು ಮೈತ್ರಿ ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಕೇವಲ ಒಂದೇ ತಾಸಿನಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಮತದಾನಗಿರುವ ಬಗ್ಗೆ ತನಿಖೆ ನಡೆಸಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಇದಕ್ಕಾಗಿ ಒಂದು ಸಮಿತಿಯನ್ನೋ, ಕಮಿಟಿಯನ್ನೋ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಡಿಕೆಶಿಯಿಂದ ಆಪರೇಷನ್ ಹಸ್ತ:
ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣಬಲ ಪ್ರಯೋಗಿಸುತ್ತಿದೆ. ಅವರಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿರಬಹುದು. ಈ ಕಾರಣದಿಂದಾಗಿ ಈ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಡಿ.ಕೆ.ಶಿವಕುಮಾರ್ ಬಿಜೆಪಿ ಕಾರ್ಯಕರ್ತರನ್ನು ಖರೀದಿಸಲು ಹವಣಿಸುತ್ತಿದ್ದಾರೆ. ಹಣ ನೀಡಿ ಬಿಜೆಪಿ ಕಾರ್ಯಕರ್ತರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಅಕ್ರಮವಾಗಿ ಗಳಿಸಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಆದರೆ, ಇದ್ಯಾವುದು ವರ್ಕೌಟ್ ಆಗಲ್ಲ. ಬಿಜೆಪಿ ಕಾರ್ಯಕರ್ತರು ಕಟ್ಟಾಬಿಜೆಪಿಗರಾಗಿದ್ದಾರೆ. ಅವರು ನಮ್ಮ ಪಕ್ಷವನ್ನು ಬಿಟ್ಟು ಹೋಗಲ್ಲ. ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದೇ ಜಿಲ್ಲೆಗೆ ಸೀಮಿತ:
ಮೈತ್ರಿ ಸರ್ಕಾರ ಬರೀ ಐದೇ ಜಿಲ್ಲೆಗೆ ಸೀಮಿತವಾಗಿದೆ. ಅಲ್ಲಿ ಲೋಕಸಭೆ ಚುನಾವಣೆಯ ವೇಳೆ ಕಾಮಗಾರಿ ಮಾಡದೇ ಗುತ್ತಿಗೆದಾರರ ಬಿಲ್ ಪಾಸ್ ಮಾಡಿ ಕಮಿಷನ್ ಹೊಡೆದಿದೆ. ಆ ಹಣವನ್ನು ಲೋಕಸಭೆ ಚುನಾವಣೆಯಲ್ಲಿ ಖರ್ಚು ಮಾಡಿದೆ. ಉತ್ತರ ಕರ್ನಾಟಕದತ್ತ ತಿರುಗಿಯೂ ನೋಡಿಲ್ಲ. ಇಲ್ಲಿನ ಜನರು ಬರದಿಂದ ತತ್ತರಿಸುತ್ತಿದ್ದಾರೆ. ಆದರೆ ಪರಿಹಾರ ಕಾಮಗಾರಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಬರೀ ನೀತಿ ಸಂಹಿತೆ ನೆಪ ಹೇಳುತ್ತಿದೆ. ಬರಪರಿಹಾರ ಕಾಮಗಾರಿಗಳಿಗೆ ನೀತಿ ಸಂಹಿತೆ ಅಡ್ಡಿಯಾಗದು. ಇದು ಕೂಡ ಮೈತ್ರಿ ಸರ್ಕಾರದಲ್ಲಿ ಇರುವವರಿಗೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಚುನಾವಣೆ ಹೆಸರಲ್ಲಾದರೂ ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಪ್ರಚಾರ ಮಾಡಬೇಕು. ಇದರೊಂದಿಗೆ ಇಲ್ಲಿನ ಜನ ಜಾನುವಾರುಗಳ ಪರಿಸ್ಥಿತಿ ಅರಿತುಕೊಳ್ಳಬೇಕು. ಇನ್ನುಮೇಲಾದರೂ ಬರಪರಿಹಾರ ಕಾಮಗಾರಿ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
