ಕೊಲಂಬೋ[ಏ.26]: ಕಳೆದ ಭಾನುವಾರ ಈಸ್ಟರ್ ಪ್ರಾರ್ಥನೆ ವೇಳೆ ನಡೆದ ಸರಣಿ ಆತ್ಮಾಹುತಿ ಸ್ಫೋಟಗಳಲ್ಲಿ 359 ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದ ಲಂಕಾ ಸರ್ಕಾರ ಇದೀಗ, ಸಾವಿನ ಸಂಖ್ಯೆಯನ್ನು 253ಕ್ಕೆ ಇಳಿ ಸಿದೆ. ಘಟನೆಯಲ್ಲಿ ಛಿದ್ರ ಛಿದ್ರಗೊಂಡಿದ್ದ ಶವ ಗಳನ್ನು ಪ್ರತ್ಯೇಕ ವ್ಯಕ್ತಿಗಳೆಂದು ತಪ್ಪು ಲೆಕ್ಕಾಚಾರ ಹಾಕಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಆದರೆ ಎಲ್ಲಾ ಶವಗಳ ಮರಣೋತ್ತರ ವರದಿ ಬಳಿಕ ದಾಳಿಗೆ ಬಲಿಯಾದವರ ಸಂಖ್ಯೆ 253 ಎಂದು ಖಚಿತಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಮತ್ತೆ 16 ಶಂಕಿತರನ್ನು ಬಂಧಿಸಲಾಗಿದೆ. ಈ ಮೂಲಕ ಈ ಉಗ್ರ ಕೃತ್ಯದಲ್ಲಿ ಇದುವರೆಗೂ ಸೆರೆಯಾದ ಶಂಕಿತರ ಸಂಖ್ಯೆ 76ಕ್ಕೇರಿದೆ. ಬಂಧಿತರೆಲ್ಲ ಎನ್‌ಟಿಜೆ ಉಗ್ರ ಸಂಘಟನೆಯ ಸದಸ್ಯರೆಂದು ಶಂಕಿಸಲಾಗಿದೆ. 3 ಹೋಟೆಲ್ ಮತ್ತು 3 ಚರ್ಚ್‌ಗಳಲ್ಲಿ ನಡೆದ ದಾಳಿಯಲ್ಲಿ ತೌಹೀದ್ ಜಮಾತ್ ಉಗ್ರ ಸಂಘಟನೆಯ 9 ಮಂದಿ ಆತ್ಮಾಹುತಿ ದಾಳಿಕೋರರು ಭಾಗಿಯಾಗಿದ್ದರು. ಶಂಕಿತ ಉಗ್ರರ ಬಂಧನಕ್ಕಾಗಿ ವಾಯುಸೇನೆಯ 1000 ಸಿಬ್ಬಂದಿ, ನೌಕಾಪಡೆಯ 600 ಸೇರಿ ಒಟ್ಟಾರೆ, 6300 ಯೋಧರನ್ನು ಶ್ರೀಲಂಕಾ ಸೇನೆ ನಿಯೋಜಿಸಿದೆ.

ಡ್ರೋನ್ ಬ್ಯಾನ್ ಮಾಡಿದ ಶ್ರೀಲಂಕಾ: ಏತನ್ಮಧ್ಯೆ, ಸರಣಿ ಸ್ಫೋಟದ ಹಿನ್ನೆಲೆ ಹಾಗೂ ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾ ಮಾನವ ರಹಿತ ವಿಮಾನ ಹಾಗೂ ಡ್ರೋನ್‌ಗಳ ಮೇಲೆ ನಿಷೇಧ ಹೇರಿದೆ. ಶ್ರೀಲಂಕಾದಲ್ಲಿ ತಾತ್ಕಾಲಿಕ ವಾಗಿ ಮಾನವರಹಿತ ವಿಮಾನ ಹಾಗೂ ಡ್ರೋನ್‌ಗಳ ಹಾರಾಟದ ಮೇಲೆ ನಿಷೇಧ ಹೇರಲಾಗಿದೆ.