ನವದೆಹಲಿ[ಮೇ.02]: ಭಾರತೀಯರು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಬಲಿಪಡೆದ ಶ್ರೀಲಂಕಾ ಸರಣಿ ಸ್ಫೋಟದ ದಾಳಿ ಬಗ್ಗೆ ಭಾರತದ ಗುಪ್ತಚರ ನೀಡಿದ ಎಚ್ಚರಿಕೆಯನ್ನು ಶ್ರೀಲಂಕಾ ಏಕೆ ನಿರ್ಲಕ್ಷ್ಯ ಮಾಡಿತ್ತು ಎಂಬ ವಿಚಾರ ಇದೀಗ ಬಯಲಾಗಿದೆ. ದ್ವೀಪ ರಾಷ್ಟ್ರ ಲಂಕಾದಲ್ಲಿ ಉಗ್ರರು ದಾಳಿಗೆ ಮುಂದಾಗಿದ್ದಾರೆ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಬೆಟ್ಟು ಮಾಡುವ ಮೂಲಕ ತನ್ನನ್ನು ಪಾಕಿಸ್ತಾನದ ವಿರುದ್ಧ ಎತ್ತಿಕಟ್ಟಲು ಭಾರತ ಯತ್ನಿಸುತ್ತಿದೆ ಎಂದು ಲಂಕಾ ಸರ್ಕಾರ ಭಾವಿಸಿತ್ತು. ಇದೇ ಕಾರಣಕ್ಕೆ ಆತ್ಮಾಹುತಿ ಬಾಂಬ್‌ ದಾಳಿಗಳ ಕುರಿತು ಭಾರತ ನೀಡಿದ ನಿಖರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಶ್ರೀಲಂಕಾವೇ ಒಪ್ಪಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಸರು ಹೇಳಿಕೊಳ್ಳಲಿಚ್ಚಿಸದ ಶ್ರೀಲಂಕಾ ಹಿರಿಯ ಅಧಿಕಾರಿಯೊಬ್ಬರು, ‘ದ್ವೀಪ ರಾಷ್ಟ್ರದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಳ್ಳುವಂತೆ ಪುಸಲಾಯಿಸುವ ಮೂಲಕ ಶ್ರೀಲಂಕಾವನ್ನು ಪಾಕಿಸ್ತಾನ ವಿರುದ್ಧ ಎತ್ತಿಕಟ್ಟುವ ಯತ್ನ ಭಾರತ ಮಾಡುತ್ತಿದೆ ಎಂಬ ಭಾವನೆಯಿತ್ತು,’ ಎಂದು ಹೇಳಿದರು. ಆದರೆ, ಒಂದು ವೇಳೆ ಭಾರತದ ಸೂಚನೆಯನ್ನು ಪಾಲನೆ ಮಾಡಿದ್ದಲ್ಲಿ, 250ಕ್ಕೂ ಹೆಚ್ಚು ಮಂದಿ ಬಲಿಪಡೆದ ಈಸ್ಟರ್‌ ದಿನ ನಡೆದ ಸರಣಿ ಬಾಂಬ್‌ ಸ್ಫೋಟ ಘಟನೆಯನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ.

ದೇಶದಲ್ಲಿ ವ್ಯಾಪಿಸಿರುವ ಉಗ್ರವಾದ ಚಟುವಟಿಕೆಯನ್ನು ನಿಗ್ರಹಿಸುವಂತೆ ಕಳೆದ ಎರಡು ವರ್ಷಗಳಿಂದ ಲಂಕಾ ಸರ್ಕಾರಕ್ಕೆ ಕಳೆದ ಎರಡು ವರ್ಷಗಳಿಂದ ಎಚ್ಚರಿಕೆ ನೀಡುತ್ತಾ ಬರಲಾಗಿದೆ. ಆದರೆ, ಯಾವುದೇ ಒಂದು ಸಮುದಾಯದ ವಿರುದ್ಧ ಕ್ರಮಕ್ಕೆ ಮುಂದಾದರೆ, ಬೌದ್ಧ ಧರ್ಮಿಯರನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟಿದಂತಾಗುತ್ತದೆ. ಅಲ್ಲದೆ, ಇದರಿಂದ ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂಬ ಭೀತಿಯಿಂದ ರಾಜಕೀಯ ನಾಯಕತ್ವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿತ್ತು.