ಕೊಲಂಬೋ: ನ್ಯೂಜಿಲೆಂಡ್‌ನ ಮಸೀದಿಗಳಲ್ಲಿ ಕಳೆದ ಮಾರ್ಚ್ ಲ್ಲಿ ನಡೆಸಲಾಗಿದ್ದ ನರಮೇಧಕ್ಕೆ ಪ್ರತೀಕಾರವಾಗಿ ಶ್ರೀಲಂಕಾದ ಚರ್ಚ್ ಹಾಗೂ ಐಷಾರಾಮಿ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಸ್ಫೋಟ ನಡೆಸಲಾಗಿದೆ ಎಂದು ಸ್ವತಃ ಲಂಕಾ ಸರ್ಕಾರವೇ ಹೇಳಿಕೊಂಡಿದೆ. ಈ ನಡುವೆ, ಭಾನುವಾರ ಸಂಭವಿಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಮಡಿದವರ ಸಂಖ್ಯೆ 321ಕ್ಕೇರಿಕೆಯಾಗಿದೆ. ಅದರಲ್ಲಿ 10 ಭಾರತೀಯರು ಸೇರಿದಂತೆ 38 ವಿದೇಶಿಗರಿದ್ದಾರೆ. ಇದರಲ್ಲಿ 45 ಮಕ್ಕಳೂ ಸೇರಿದ್ದಾರೆ ಎಂದು ಮಾಹಿತಿ ನೀಡಿದೆ.

ಭಾನುವಾರದ ಭಯಾನಕ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಂಸತ್ತಿನ ತುರ್ತು ಅಧಿವೇಶನದಲ್ಲಿ ಮಾತನಾಡಿದ ರಕ್ಷಣಾ ಖಾತೆ ರಾಜ್ಯ ಸಚಿವ ರುವಾನ್‌ ವಿಜೆವರ್ದೆನೆ ಅವರು, ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್ ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಮುಸ್ಲಿಮರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಲಂಕಾದಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟಗಳನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಶ್ರೀಲಂಕಾ ದಾಳಿಗೆ ಯಾವ ಸಂಘಟನೆ ಕಾರಣ ಎಂದು ದೂಷಿಸಲಾಗುತ್ತಿದೆಯೋ (ನ್ಯಾಷನಲ್‌ ತೌಹೀದ್‌ ಜಮಾತ್‌) ಅದೇ ಸಂಘಟನೆಯ ಸದಸ್ಯನೊಬ್ಬ ಕ್ರೈಸ್ಟ್‌ ಚರ್ಚ್ ಶೂಟೌಟ್‌ ಬಳಿಕ ತೀವ್ರಗಾಮಿ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದ. ದಾಳಿಗೂ ಮುನ್ನ ಕೆಲವು ಸರ್ಕಾರಿ ಅಧಿಕಾರಿ ಅಧಿಕಾರಿಗಳಿಗೆ ಬಂದ ಗುಪ್ತಚರ ಇಲಾಖೆಯ ಟಿಪ್ಪಣಿಯಲ್ಲೂ ಈ ಅಂಶವಿತ್ತು ಎಂದು ಅವರು ಹೇಳಿದರು. ಘಟನೆಯಲ್ಲಿ ಭಾಗಿಯಾದವರೆಲ್ಲಾ ಶ್ರೀಲಂಕಾ ಮೂಲದವರಾಗಿದ್ದರೂ, ಅವರಿಗೆ ವಿದೇಶಿ ನಂಟಿನ ಅನುಮಾನ ಇದೆ. ಈ ಹಿನ್ನೆಲೆಯಲ್ಲಿ ಎನ್‌ಟಿಜೆ ಸಂಘಟನೆಯನ್ನು ಶ್ರೀಲಂಕಾದಲ್ಲಿ ನಿಷೇಧಿಸುವ ಪ್ರಸ್ತಾಪವನ್ನೂ ಅವರು ಮಾಡಿದ್ದಾರೆ.

ಕ್ರೈಸ್ಟ್‌ ಚರ್ಚ್ ಲ್ಲಿ ಕಳೆದ ಮಾ.15ರಂದು ಎರಡು ಮಸೀದಿಗಳ ಮೇಲೆ ಬಲಪಂಥೀಯ ತೀವ್ರಗಾಮಿಯೊಬ್ಬ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದ. ಆ ಘಟನೆಯಲ್ಲಿ 50 ಮಂದಿ ಮುಸ್ಲಿಮರು ಬಲಿಯಾಗಿದ್ದರು.

ಇದೇ ವೇಳೆ ಮಾತನಾಡಿದ ಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ, ಜಾಗತಿಕ ಭಯೋತ್ಪಾದನೆ ಶ್ರೀಲಂಕಾವನ್ನು ತಲುಪಿರುವುದನ್ನು ಭಾನುವಾರದ ದಾಳಿ ನಿರೂಪಿಸಿದೆ ಎಂದು ಹೇಳಿದರು.