ಬೆಂಗಳೂರು: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಮುಂಜಾಗ್ರತಾ ಸಭೆಗಳನ್ನು ನಡೆಸಲಾಗಿದೆ.

ಮೈಸೂರು ಜಿಲ್ಲೆಯ ಧಾರ್ಮಿಕ ಮುಖಂಡರು, ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರೊಂದಿಗೆ ಸಭೆ ನಡೆಸಿದ ಮೈಸೂರು ಎಸ್ಪಿ ಅಮಿತ್ ಸಿಂಗ್, ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ, ಲೋಹ ಶೋಧಕ ಯಂತ್ರಗಳನ್ನು ಬಳಸಿ ತಪಾಸಣೆ ನಡೆಸುವಂತೆ ಸೂಚಿಸಿದರು. 

ಈ ನಡುವೆ, 100ಕ್ಕಿಂತ ಹೆಚ್ಚು ಜನ ಓಡಾಡುವ, ಸೇರುವ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಉದ್ಯಮಿ, ವ್ಯಾಪಾರಿಗಳಿಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಂ. ಅಶ್ವಿನಿ ಸೂಚಿಸಿದ್ದಾರೆ.