Asianet Suvarna News Asianet Suvarna News

ರಾಜಕೀಯ ನಿವೃತ್ತಿ ಸವಾಲು ಸ್ವೀಕರಿಸಿದ ಶ್ರೀರಾಮುಲು

ಕಾಂಗ್ರೆಸ್ಸಿಗರು ಮಹಾನ್‌ ಸುಳ್ಳುಗಾರರು. ಬೇಕಾದರೆ ಅವರು ಶ್ವೇತಪತ್ರ ಹೊರಡಿಸಲಿ. ನಮಗಿಂತ ಒಂದು ರುಪಾಯಿ ಹೆಚ್ಚು ಅನುದಾನ ನೀಡಿದ್ದರೆ ಇಂದೇ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶ್ರೀರಾಮುಲು ಸವಾಲ್ ಹಾಕಿದ್ದಾರೆ.

Sreeramulu Slams DK Shivakumar
Author
Bengaluru, First Published Oct 25, 2018, 11:12 AM IST

ಬಳ್ಳಾರಿ :  ಬಿಜೆಪಿ ಅಧಿಕಾರದಲ್ಲಿದ್ದಾಗ ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಂದಿದೆ. ಹೆಚ್ಚು ಅಭಿವೃದ್ಧಿಯಾಗಿದೆ. ಕಾಂಗ್ರೆಸ್ಸಿಗರು ಮಹಾನ್‌ ಸುಳ್ಳುಗಾರರು. ಬೇಕಾದರೆ ಅವರು ಶ್ವೇತಪತ್ರ ಹೊರಡಿಸಲಿ. ನಮಗಿಂತ ಒಂದು ರುಪಾಯಿ ಹೆಚ್ಚು ಅನುದಾನ ನೀಡಿದ್ದರೆ ಇಂದೇ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ನನ್ನ ಸಹೋದರಿ ಶಾಂತಾ ಅವರನ್ನು ಕೂಡ ರಾಜಕೀಯ ನಿವೃತ್ತಿ ಮಾಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು, ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ್ದಾರೆ.

ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಲಂಗು ಲಗಾಮು ಇಲ್ಲದೆ ಮಾತನಾಡುತ್ತಿದ್ದಾರೆ. ನಮಗೂ ಮಾತನಾಡಲು ಬರುತ್ತದೆ. ಆದರೆ, ಅವರಂತೆ ಮಾತನಾಡುವುದು ಸಭ್ಯತೆ ಅಲ್ಲ. ಎಸ್ಟಿಸಮುದಾಯಕ್ಕೆ ಶೇ.7.5 ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದ ರಾಮುಲು, ನಮ್ಮ ಸಮುದಾಯಕ್ಕೆ ಕಾಂಗ್ರೆಸ್‌ ನೀಡಿದ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಈ ಕುರಿತು ಬಹಿರಂಗ ಚರ್ಚೆಗೆ ಬನ್ನಿ. ದಾಖಲೆ ಸಮೇತ ನಾನು ಸಹ ಬರುವೆ ಎಂದು ಸವಾಲು ಹಾಕಿದರು. ಬಿಜೆಪಿ ಅಭ್ಯರ್ಥಿ ಶಾಂತಾ ಗೆಲುವಿಗೆ ನಮ್ಮ ಪಕ್ಷದ ಎಲ್ಲ ಮುಖಂಡರು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಸೋಲುವ ಭೀತಿ ಶುರುವಾಗಿದೆ. ಹೀಗಾಗಿಯೇ ಇಷ್ಟಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗಳು ಆಗಿದ್ದು, ಸಿದ್ದರಾಮಯ್ಯ ಹೇಳಿದ ಸೆಕ್ಷನ್‌ಗಳು ಅವರಿಗೆ ಅನ್ವಯಿಸುತ್ತವೆ ಎಂದು ತಿರುಗೇಟು ನೀಡಿದರು.

ರಾಮುಲು ಪಕ್ಕದ ಜಿಲ್ಲೆಗೆ ಹೋಗಿದ್ದೇಕೆ?

ಬಳ್ಳಾರಿ :  ಪರಿಶಿಷ್ಟಪಂಗಡಕ್ಕೆ . 27 ಸಾವಿರ ಕೋಟಿ ಅನುದಾನ ನೀಡಿದ್ದು ಕಾಂಗ್ರೆಸ್‌ ಸರ್ಕಾರ. ಮಹರ್ಷಿ ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಬಳ್ಳಾರಿ ಜಿಲ್ಲೆಗಾಗಲೀ, ರಾಜ್ಯಕ್ಕಾಗಲೀ ಕಾಂಗ್ರೆಸ್‌ನ ಕೊಡುಗೆ ಸಾಕಷ್ಟಿದೆ. ಅನುದಾನ ನೀಡಿಕೆ ಸಂಬಂಧ ಶ್ರೀರಾಮುಲು ನೀಡಿರುವ ಸವಾಲನ್ನು ನಾನು ಸಹ ಸ್ವೀಕರಿಸಿರುವೆ. ಚರ್ಚೆಗೆ ಅವರೇ ಡೇಟ್‌ ಫಿಕ್ಸ್‌ ಮಾಡಲಿ. ನಾವು ಬರ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಪಂಥಾಹ್ವಾನ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾತಿನ ನಡುವೆ ಪದೇ ಪದೇ ‘ಶ್ರೀರಾಮುಲು ಅಣ್ಣಾ’ ಎಂದು ಸಂಬೋಧಿಸುತ್ತಲೇ, ಶ್ವೇತಪತ್ರ ಹೊರಡಿಸುವಂತೆ ಶ್ರೀರಾಮುಲು ಹಾಕಿದ ಸವಾಲನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

ಬಳ್ಳಾರಿ ಹಾಗೂ ರಾಜ್ಯಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರವಿದೆ. ಬಿ.ಶ್ರೀರಾಮುಲು ಅಣ್ಣನವರು ಹುಟ್ಟು ಕಾಂಗ್ರೆಸ್ಸಿಗ. ಸುಷ್ಮಾಸ್ವರಾಜ್‌ ಅವರು ಬಳ್ಳಾರಿಯಲ್ಲಿ ಸ್ಪರ್ಧಿಸುವ ವೇಳೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದ್ರು. ಬಳ್ಳಾರಿ ಜಿಲ್ಲೆಯ ಬಗ್ಗೆ ಅಪಾರ ಗೌರವ ಇರುವ ಶ್ರೀರಾಮುಲು ಅಣ್ಣನವರು ಪಕ್ಕದ ಜಿಲ್ಲೆಗೆ ಹೋಗಿದ್ದೇಕೆ? ಎಂದು ಕಿಚಾಯಿಸಿದರು.

ಶ್ರೀರಾಮುಲು ಬಳ್ಳಾರಿಗೆ ಹೆಚ್ಚು ಅನುದಾನ ತಂದಿದ್ದಾರೆ, ಮಾಡ್ಕೊಂಡಿದ್ದಾರೆ. ಇಟ್ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಹೀಗಂದರೇನು? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ಅನುದಾನ ಬಳಕೆ ವಿಚಾರದಲ್ಲಪ್ಪಾ’ ಎಂದು ಟಾಂಗ್‌ ನೀಡಿದರು.

ಉಗ್ರಪ್ಪ ಅವರಿಗೆ ರಾಜಕೀಯ ಇತಿಹಾಸವಿದೆ. ಪ್ರಬುದ್ಧರಿದ್ದಾರೆ ಎಂದ ಶಿವಕುಮಾರ್‌, ನಾನು ರಾಜಕೀಯದಲ್ಲಿ ಸ್ನೇಹ ಮಾಡುವುದಿಲ್ಲ. ರಾಜಕಾರಣ ಬೇರೆ, ಫ್ರೆಂಡ್‌ಶಿಪ್‌ ಬೇರೆ ಎಂದು ತಿಳಿಸಿದರು.

Follow Us:
Download App:
  • android
  • ios