ಶಬರಿಮಲೆ: 10 ರಿಂದ 50 ವರ್ಷ ನಡುವಿನ ವಯೋಮಾನದ ಮಹಿಳೆಯರ ಪ್ರವೇಶದ ಕಾರಣಕ್ಕಾಗಿಯೇ ಕಳೆದ 5 ದಿನಗಳಿಂದ ಸುದ್ದಿಯಲ್ಲಿದ್ದ ಶಬರಿಮಲೆ ದೇಗುಲ, ಸೋಮವಾರ ವಿಶೇಷ ಕಾರಣಕ್ಕಾಗಿ ಬಹುಜನರ ಗಮನ ಸೆಳೆಯಿತು. ಕಳೆದ ಶುಕ್ರವಾರ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಮತ್ತು ಪತ್ರಕರ್ತೆ ಕವಿತಾ ಜಕ್ಕಲ್‌ ಅವರಿಗೆ ಭಾರೀ ಭದ್ರತೆ ನೀಡಿ ದೇಗುಲದ ಪ್ರವೇಶ ದ್ವಾರದವರೆಗೂ ಕರೆತಂದಿದ್ದ ಕೇರಳದ ಐಜಿಪಿ ಶ್ರೀಜಿತ್‌, ಸೋಮವಾರ ಮುಂಜಾನೆಯೇ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿ ಕಣ್ಣೀರಿಟ್ಟ ಘಟನೆ ನಡೆಯಿತು.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಫಾತಿಮಾ ಮತ್ತು ಕವಿತಾಗೆ 100ಕ್ಕೂ ಹೆಚ್ಚು ಪೊಲೀಸರ ಭದ್ರತೆ ನೀಡಿದ್ದ ಶ್ರೀಜಿತ್‌, ಅವರನ್ನು ದೇಗುಲ ಪ್ರವೇಶಕ್ಕೆಂದು ಕರೆತಂದಿದ್ದರು. ಆದರೆ ಮಹಿಳೆಯರು ದೇಗುಲಕ್ಕೆ ಬಂದರೆ, ದೇಗುಲದ ಬಾಗಿಲನ್ನೇ ಮುಚ್ಚುವುದಾಗಿ ಅರ್ಚಕರು ಬೆದರಿಕೆ ಹಾಕಿದ ಬಳಿಕ, ಇಬ್ಬರೂ ಮಹಿಳೆಯರು, ದೇಗುಲ ಪ್ರವೇಶದಿಂದ ಹಿಂದೆ ಸರಿದಿದ್ದರು. ಈ ನಡುವೆ ಮಹಿಳೆಯರಿಗೆ ಭದ್ರತೆ ಒದಗಿಸಿದ್ದ ಶ್ರೀಜಿತ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಭಕ್ತರು ಭಾರೀ ಟೀಕೆ ವ್ಯಕ್ತಪಡಿಸಿ, ಅವರ ವಿರುದ್ಧ ಹೋರಾಟಕ್ಕೆಲ್ಲಾ ಕರೆ ಕೊಟ್ಟಿದ್ದರು.

ಈ ಟೀಕೆಗಳಿಂದ ತೀವ್ರವಾಗಿ ನೊಂದಿದ್ದ ಶ್ರೀಜಿತ್‌, ಸೋಮವಾರ ಮುಂಜಾನೆ 5 ಗಂಟೆಗೆ ದೇಗುಲದ ಬಾಗಿಲು ತೆರೆಯುತ್ತಲೇ, ಸಾಮಾನ್ಯ ವಸ್ತ್ರದಲ್ಲಿ ಆಗಮಿಸಿ ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅವರು ಕಣ್ಣೀರಿಟ್ಟಿದ್ದು ಕಂಡುಬಂದಿತು.