ನ.21, ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ  ಆರಂಭವಾಗಲಿರುವ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಬರಗಾಲದ ವಿಚಾರ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಲಿದೆ. ಜತೆಗೆ ಇನ್ನೂ ಹಲವಾರು ಪ್ರಮುಖ ಅಸ್ತ್ರಗಳೂ ವಿಪಕ್ಷಗಳ ಬತ್ತಳಿಕೆಯಲ್ಲಿವೆ. ಆ ಎಲ್ಲ ವಿವರಗಳ ವಿಶೇಷ ವರದಿ ಇಲ್ಲಿದೆ.

ಬೆಳಗಾವಿ(ನ. 21): ಕುಂದಾನಗರಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ವಿಶೇಷ ಅಧಿವೇಶನ ಆರಂಭವಾಗುತ್ತಿದೆ.. ಸರ್ಕಾರ ಹಾಗೂ ವಿಪಕ್ಷಗಳು ಈಗಾಗಲೇ ಸರ್ವ ರೀತಿಯಲ್ಲೂ ಸಜ್ಜಾಗಿವೆ.. ಅಧಿವೇಶನದ ಮೊದಲ ದಿನ ರಾಜ್ಯದಲ್ಲಿ ಕಾಡುತ್ತಿರುವ ತೀವ್ರ ಬರಗಾಲ ಹಾಗೂ ಪರಿಹಾರ ಕಾಮಗಾರಿಯಲ್ಲಿ ಸರ್ಕಾರದ ವೈಫಲ್ಯತೆಯ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಪ್ಲಾನ್ ಮಾಡಿದೆ. ಸದನದ ಹೊರಗೆ ಅಂದ್ರೆ, ಸುವರ್ಣಸೌಧದ ಮುಂಭಾಗದಲ್ಲಿ ಬರಗಾಲದಿಂದ ತತ್ತರಿಸಿರುವ ರೈತರು ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಇದರ ಹೊರತಾಗಿಯು ಹಲವು ಅಸ್ತ್ರಗಳು ಸರ್ಕಾರದ ವಿರುದ್ಧ ರೆಡಿಯಾಗಿವೆ.

ಪ್ರತಿ ಬಾರಿಯೂ ಸದನ ಆರಂಭವಾಗುತ್ತಲೇ ಗದ್ದಲಗಳು ಜೋರಾಗುತ್ತವೆ. ಹೀಗಾಗಿ ಸುಗಮ‌ ಕಲಾಪ ದೃಷ್ಟಿಯಿಂದ ಸದನದ ನಿಯಮಾವಳಿ ಬದಲಾವಣೆಗೆ ಸ್ಪೀಕರ್ ಕೆ.ಬಿ. ಕೋಳಿವಾಡ ಮುಂದಾಗಿದ್ದು, ಈ ಬಗ್ಗೆ ಕರಡು ಮಂಡನೆ ಆಗುವ ಸಾಧ್ಯತೆ ಇದೆ. ಈ‌ ಮೊದಲು ಸದನ ಆರಂಭಕ್ಕೂ ಒಂದು ಗಂಟೆ‌ ಮೊದಲು ನಿಲುವಳಿ ಸೂಚನೆ ಮಂಡನೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದ್ರೆ, ಈ ಕರಡು ಮಂಡನೆಯಾಗಿ ಅಂಗೀಕಾರವಾದ್ರೆ ಮುಂದಿನ ದಿನಗಳಲ್ಲಿ ನಿಲುವಳಿ ಸೂಚನೆ ಮಂಡನೆಗೆ ಮಧ್ಯಾಹ್ನದ ನಂತರ‌ ಅವಕಾಶ ಸಿಗಲಿದೆ.

ಮಂಡನೆಯಾಗಲಿರುವ ವಿಧೇಯಕಗಳು
1) ಕರ್ನಾಟಕ ಆಯುರ್ವೇದ ಪ್ರಕೃತಿ ಚಿಕಿತ್ಸೆ ವಿಧೇಯಕ 2016
2) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2016 ಮಂಡನೆ
3) ಸುಗಮ ಕಲಾಪ ಕುರಿತ ರಾಮಚಂದ್ರೇಗೌಡ ಸಮಿತಿಯ ವರದಿ ಮಂಡನೆ ಸಾಧ್ಯತೆ
4) ಈ ಅಧಿವೇಶನದಲ್ಲಿ 150 ಚುಕ್ಕೆ ಗುರುತಿನ‌ ಪ್ರಶ್ನೆಗಳು ಚರ್ಚೆಗೆ ಬರುವ ಸಾಧ್ಯತೆ
5) ಲಿಖಿತ ಉತ್ತರ ನೀಡುವ 1938 ಪ್ರಶ್ನೆಗಳು ಚರ್ಚೆಗೆ ಬರುವ ಸಾಧ್ಯತೆ

ಸರ್ಕಾರದ ವಿರುದ್ಧ ಸಜ್ಜಾದ ವಿಪಕ್ಷಗಳ ಅಸ್ತ್ರ!
* ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ವಿಚಾರ
* ರಾಜ್ಯಾದ್ಯಂತ ಬರ ಸಮಸ್ಯೆ, ಪರಿಹಾರ ವಿಚಾರ, ರೈತರ ಸಾಲ ಮನ್ನಾ ವಿಚಾರ
* ಕಬ್ಬು ಬೆಳೆಗಾರರಿಗೆ ಬರಬೇಕಾಗಿರುವ ಬಾಕಿ ಹಣ ಪ್ರಸ್ತಾಪಕ್ಕೆ ಪ್ಲಾನ್
* ಸಂಘಪರಿವಾರ ಹಾಗೂ ಬಿಜೆಪಿ‌ ಮುಖಂಡರ ಸರಣಿ ಹತ್ಯೆ ಪ್ರತಿಧ್ವನಿಸುವ ಸಾಧ್ಯತೆ
* ಮಹದಾಯಿ ನದಿ ನೀರು ಯೋಜನೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ

ಶಾಸಕರಿಗೆ ಐಷಾರಾಮಿ ವಾಸ್ತವ್ಯದ ವ್ಯವಸ್ಥೆ
* ಸಚಿವರು, ವಿಪಕ್ಷನಾಯಕರಿಗೆ ಗಾಂಧಿನಗರದಲ್ಲಿರುವ ಸಂಕಮ್​ ಹೋಟೆಲ್​ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ
* ಸಭಾಧ್ಯಕ್ಷರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ
* ವಿಧಾನಪರಿಷತ್​ ಸದಸ್ಯರಿಗೆ ಹೋಟೆಲ್​ ಸನ್ಮಾನ್​ ಡಿಲೆಕ್ಸ್​ ಹೋಟೆಲ್​ನಲ್ಲಿ ವಾಸ್ತವ್ಯ
* ಜಾತ್​ ಗೇಟ್​ ವೇ, ಡೆನಿಜನ್, ಆದರ್ಶ ಪಾಲ್ಯೇಸ್​ನಲ್ಲಿ ಶಾಸಕರಿಗೆ ವ್ಯವಸ್ಥೆ
* ಆಪ್ತ ಸಹಾಯಕರು,ಗನ್​ಮ್ಯಾನ್​ಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಲ್ಲ

ಸರ್ಕಾರಕ್ಕೆ ಕಗ್ಗಂಟಾದ ಬರ ಸಮಸ್ಯೆ
* ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 139 ತಾಲೂಕುಗಳಲ್ಲಿ ಬರಗಾಲ
* ಬರಗಾಲ ನಿರ್ವಹಿಸಲು ಎಡವಿದ ಸಿದ್ದರಾಮಯ್ಯ ಸರ್ಕಾರ
* ಬ್ಯಾಂಕ್​ಗಳಲ್ಲಿ ರೈತರ ಸಾಲವನ್ನು ತಕ್ಷಣ ಮನ್ನಾ ಮಾಡುವಂತೆ ಆಗ್ರಹಿಸಬಹುದು
* ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರಕ್ಕೆ ಪಟ್ಟು ಸಾಧ್ಯತೆ
* ಉಭಯ ಸದನಗಳಲ್ಲಿ ಬಿಜೆಪಿ, ಜೆಡಿಎಸ್‌ ಗದ್ದಲವೆಬ್ಬಿಸುವ ಸಾಧ್ಯತೆ

ಸರ್ಕಾರಕ್ಕೆ ನದಿ ನೀರಿನ ಸಂಘರ್ಷ
1) ಕೃಷ್ಣಾ ನದಿಯಲ್ಲಿ ಕರ್ನಾಟಕಕ್ಕೆ ಹಂಚಿಕೆ ಆಗಿರುವ ಹೆಚ್ಚುವರಿ ನೀರಿನ ಬಳಕೆಗೆ ಸಮರ್ಪಕ ಯೋಜನೆಗಳನ್ನು ರೂಪಿಸದಿರುವ ಬಗ್ಗೆಯೂ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಿವೆ.
2) ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ನಡುವಿನ ಮಹಾದಾಯಿ ವಿವಾದ ಕುರಿತು ಮುಂಬೈ– ಕರ್ನಾಟಕ ಭಾಗದ ಶಾಸಕರು ಪಕ್ಷಭೇದ ಮರೆತು ದನಿ ಎತ್ತಲು ನಿರ್ಧರಿಸಿದ್ದಾರೆ.
3) ಹುಬ್ಬಳ್ಳಿ–ಧಾರವಾಡ ಮತ್ತಿತರ ಭಾಗಗಳ ಜನರಿಗೆ ಕುಡಿಯುವ ಉದ್ದೇಶಕ್ಕೆ 7.56 ಟಿಎಂಸಿ ಅಡಿ ನೀರು ಕೊಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸುವ ಸಂಭವವಿದೆ.
4) ಮಹಾದಾಯಿ ನ್ಯಾಯಮಂಡಳಿ ಮೂರು ರಾಜ್ಯಗಳು ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದ್ದರೂ ಇದುವರೆಗೆ ಮುಖ್ಯಮಂತ್ರಿಗಳು ಚರ್ಚಿಸಿಲ್ಲ. ಕೇಂದ್ರದ ಮಧ್ಯಸ್ಥಿಕೆ ಇಲ್ಲದೆ ಈ ಸಭೆ ನಡೆಯದು ಎಂಬ ಅಭಿಪ್ರಾಯ ಕರ್ನಾಟಕಕ್ಕಿದೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರುವಂತೆ ಬಿಜೆಪಿ ನಾಯಕರನ್ನು ಆಡಳಿತ ಪಕ್ಷ ಕಾಂಗ್ರೆಸ್‌ ಮತ್ತೊಮ್ಮೆ ಒತ್ತಾಯಿಸಲಿದೆ.
5) ಇದಲ್ಲದೆ, ಕಬ್ಬು ಬೆಳೆಗಾರರ ಸಮಸ್ಯೆಯೂ ಸದನದಲ್ಲಿ ಪ್ರತಿಧ್ವನಿಸಲಿದೆ. ಸಕ್ಕರೆ ಕಾರ್ಖಾನೆಗಳಿಂದ ತಮಗೆ ಬರಬೇಕಾಗಿರುವ ಬಾಕಿ ಹಣ ಪಾವತಿಸಲು ಸೂಚಿಸುವಂತೆ ನೂರಾರು ರೈತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದ್ದಾರೆ.
6) ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆ ರೈತರು ಪ್ರಮುಖವಾಗಿ ಕಬ್ಬು ಬೆಳೆಯುತ್ತಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 23 ಕಾರ್ಖಾನೆಗಳಿವೆ. ಸಾವಿರಾರು ರೈತರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸಬೇಕಿದೆ. ಅನೇಕ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ (ನ್ಯಾಯಬದ್ಧ ಮತ್ತು ಲಾಭದಾಯಕ ಬೆಲೆ)ಕಡಿಮೆ ದರ ಪಾವತಿಸಿದ ದೂರುಗಳಿವೆ. ಎರಡು ವರ್ಷದ ಹಿಂದೆ ಚಳಿಗಾಲ ಅಧಿವೇಶನದ ಸಮಯದಲ್ಲಿ ವಿಠ್ಠಲ ಅರಬಾವಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸರ್ಕಾರ ಆತಂಕದಿಂದಲೇ ರೈತರತ್ತ ನೋಡುತ್ತಿದೆ.

ಒಟ್ಟಿನಲ್ಲಿ ಇಂದಿನಿಂದ ಕುಂದಾನಗರಿ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಸಜ್ಜಾಗಿದ್ದು, ಈ ಬಾರಿ ಅಧಿವೇಶನದಲ್ಲಿ ರೈತರ ಸಮಸ್ಯೆಗೇ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಹಾಗೂ ವಿಪಕ್ಷಗಳು ನಿರ್ಧರಿಸಿರುವುದು ಸಮಾಧಾನಕರ.. ಆದರೆ ಇದು ಯಶಸ್ವಿಯಾಗಬೇಕಿದೆ.

- ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ, ಬೆಳಗಾವಿ