ನವದೆಹಲಿ[ಸೆ,.21]: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಇಡಿ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಊಟದ ಬಳಿಕ ತೀರ್ಪಿನ ದಿನಾಂಕ ಪ್ರಕಟಗೊಳಿಸುವುದಾಗಿ ಕೋರ್ಟ್ ತಿಳಿಸಿದ್ದು, ತೀರ್ಪು ಮುಂದಿನ ವಾರ ಪ್ರಕಟವಾಗುವ ಸಾಧ್ಯತೆಗಳಿವೆ.

ಬರೋಬ್ಬರಿ 3 ಗಂಟೆ ಕಾಲ ಇಡಿ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಊಟದ ಬಳಿಕ ತೀರ್ಪಿನ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ. ಹೀಗಾಘಿ ಸದ್ಯಕ್ಕೆ ಡಿಕೆಶಿಗೆ ತಿಹಾರ್ ಜೈಲೇ ಗತಿ ಎಂಬಂತಾಗಿದೆ.

ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್‌ ಕುಹಾರ್‌ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ನೀಡಬಾರದು ಎಂದು ಇ.ಡಿ. ಪರ ಅಡಿಷನಲ್ ಸಾಲಿಸಿಟರ್‌ ಜನರಲ್ ಕೆ.ಎಂ. ನಟರಾಜ್ ವಾದಿಸುತ್ತಿದ್ದರೆ, ಜಾಮೀನು ಕೋರಿರುವ ಡಿ.ಕೆ.ಶಿವಕುಮಾರ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡನೆ ನಡೆಸಿದ್ದಾರೆ.

ಈವರೆಗೆ ಏನೇನಾಯ್ತು?

ಸೆ.17ಕ್ಕೆ ಡಿ.ಕೆ.ಶಿವಕುಮಾರ್‌ ನ್ಯಾಯಂಗ ಬಂಧನಕ್ಕೆ ಒಳಗಾಗಿದ್ದು, ಸೆ.19ಕ್ಕೆ ರಾಮ್ ಮನೋಹರ್‌ ಲೋಹಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಿಹಾರ್‌ ಜೈಲು ಸೇರಿಕೊಂಡಿದ್ದಾರೆ. ಒಂದು ವೇಳೆ ನ್ಯಾಯಾಲಯವು ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿ ತಿರಸ್ಕರಿಸಿದರೆ ಅ.1ರವರೆಗೆ ತಿಹಾರ್‌ ಜೈಲಿನಲ್ಲಿ ಇರಬೇಕಾಗುತ್ತದೆ. ಇ.ಡಿ.ಪರ ವಕೀಲರು ಡಿ.ಕೆ.ಶಿವಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆ ನಡೆಸಬೇಕಿದ್ದು, ಜಾಮೀನು ನೀಡಬೇಡಿ ಎಂದು ಗುರುವಾರ ಪ್ರಬಲ ವಾದ ಮಂಡಿಸಿದ್ದು, ಇಂದು ಶನಿವಾರ ಡಿ.ಕೆ.ಶಿವಕುಮಾರ್‌ ಪರ ವಕೀಲರು ಇದಕ್ಕೆ ಆಕ್ಷೇಪ ಸಲ್ಲಿಸಿದ್ದರು.