ರಾಜಕೀಯ ಪ್ರಹಸನದಿಂದ ಸದ್ದು ಮಾಡುತ್ತಿದ್ದ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಳ್ಕರ್‌ಗೆ ಇದೀಗ ವಿಶೇಷ ನ್ಯಾಯಾಲಾಯ ಜಾಮೀನು ರಹಿತ ವಾರಂಟ್ ನೀಡಿದೆ. ಅಷ್ಟಕ್ಕೂ ಹೆಬ್ಬಾಳ್ಕರ್‌ಗೆ ವಾರಂಟ್ ನೀಡಿದ್ದೇಕೆ? ಇಲ್ಲಿದೆ.

ಬೆಂಗಳೂರು(ಅ.13): ಮತದಾರರಿಗೆ ಹಣ ಹಂಚಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದೆ. 

ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಎರಡು ಬಾರಿ ಸಮನ್ಸ್‌ ಜಾರಿಗೊಳಿಸಿತ್ತು. ಆದರೂ ಲಕ್ಷ್ಮೀ ಹೆಬ್ಬಾಳ್ಕರ್‌ ವಿಚಾರಣೆಗೆ ಗೈರಾಗಿದ್ದರು. ಲಕ್ಷ್ಮೀ ಹೇಳಿಕೆ ದಾಖಲಿಸಿಬೇಕಿರುವ ಕಾರಣ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿ ಆದೇಶ ಹೊರಡಿಸಿದೆ. 

ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದೆ. ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡುವ ಮೂಲಕ ಅಮಿಷೆವೊಡ್ಡಿದ್ದರು ಎಂಬ ಆರೋಪದ ಮೇಲೆ ಬೆಳಗಾವಿ ಮಾರ್ಕೆಟ್‌ ಪೊಲೀಸ್‌ ಠಾಣೆ ಮತ್ತು ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.